ಕ್ರಿಮಿಯಾಕ್ಕೆ ಸಮುದ್ರದಡಿ ರಹಸ್ಯ ಸುರಂಗ ಮಾರ್ಗಕ್ಕೆ ರಶ್ಯ, ಚೀನಾ ಚಿಂತನೆ: ವರದಿ
ನ್ಯೂಯಾರ್ಕ್: ರಶ್ಯ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ನೀರೊಳಗಿನ ಸುರಂಗ ನಿರ್ಮಾಣದ ಯೋಜನೆಯನ್ನು ರಶ್ಯ ಮತ್ತು ಚೀನಾದ ಉದ್ಯಮಿಗಳು ಪರಿಶೀಲಿಸುತ್ತಿದ್ದಾರೆ ಎಂದು `ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ಉಕ್ರೇನಿನ ಭಾಗವಾಗಿರುವ ಕ್ರಿಮಿಯಾವನ್ನು 2014ರಲ್ಲಿ ರಶ್ಯ ಸ್ವಾಧೀನಪಡಿಸಿಕೊಂಡಿದ್ದು ತನ್ನ ಭೂಭಾಗ ಎಂದು ಘೋಷಿಸಿಕೊಂಡಿದೆ. ಆದರೆ ಚೀನಾ ಸೇರಿದಂತೆ ಅಂತರಾಷ್ಟ್ರೀಯ ಸಮುದಾಯ ಕ್ರಿಮಿಯಾದ ಮೇಲಿನ ರಶ್ಯದ ಸಾರ್ವಭೌಮತ್ವ ಪ್ರತಿಪಾದನೆಯನ್ನು ಮಾನ್ಯ ಮಾಡಿಲ್ಲ.
ಈಗ ಕೆರ್ಚ್ ಜಲಸಂಧಿಯ ಮೂಲಕ ಸಾಗುವ 11 ಮೈಲು ಉದ್ದದ ಸೇತುವೆ ರಶ್ಯ ಮತ್ತು ಕ್ರಿಮಿಯಾದ ಸಂಪರ್ಕ ಕೊಂಡಿಯಾಗಿದೆ. ಆದರೆ ಉಕ್ರೇನ್ ಮೇಲೆ ರಶ್ಯದ ಆಕ್ರಮಣ ಆರಂಭವಾದಂದಿನಿಂದ ಈ ಸೇತುವೆಯನ್ನು ಗುರಿಯಾಗಿಸಿ ಹಲವು ಬಾಂಬ್ ದಾಳಿ ನಡೆದಿರುವುದರಿಂದ ಸುರಕ್ಷಿತ ಮಾರ್ಗವನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಚೀನಾ ಕಮ್ಯುನಿಸ್ಟ್ ಪಾರ್ಟಿಗೆ ಸಂಬಂಧಿಸಿದ ಸರಕಾರಿ ಸ್ವಾಮ್ಯದ `ಚೈನೀಸ್ ರೈಲ್ವೇ ಕನ್ಟ್ರಕ್ಷನ್ ಕಾರ್ಪೊರೇಶನ್'(CRCC)ಗೆ ಈ ಯೋಜನೆ ವಹಿಸಿಕೊಡುವ ಸಾಧ್ಯತೆಯಿದ್ದು ತನ್ನ ಸಿಬಂದಿಗಳು ಕ್ರಿಮಿಯಾ ಪ್ರಾಂತದಲ್ಲಿ ಯಾವುದೇ ಸಂಕೀರ್ಣ ರೈಲ್ವೇ ಮತ್ತು ರಸ್ತೆ ನಿರ್ಮಾಣ ಕಾರ್ಯ ನಿರ್ವಹಿಸಲು ಸಮರ್ಥರಾಗಿದ್ದಾರೆ' ಎಂದು CRCC ಹೇಳಿಕೆ ನೀಡಿದೆ. ರಶ್ಯದ ಉದ್ಯಮಿ ವ್ಲಾದಿಮಿರ್ ಕಲ್ಯುಝ್ನಿ ಈ ಯೋಜನೆಯ ಗುತ್ತಿಗೆ ವಹಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ `ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.