ಉ.ಕೊರಿಯಾಕ್ಕೆ ರಶ್ಯದ ನೆರವಿನಿಂದ ಶಾಂತಿಗೆ ಅಪಾಯ: ದ.ಕೊರಿಯಾ ವಾಗ್ದಾಳಿ
ಸಿಯೋಲ್: ಉಕ್ರೇನ್‍ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧಕ್ಕೆ ಉತ್ತರ ಕೊರಿಯಾ ನೀಡುತ್ತಿರುವ ನೆರವಿಗೆ ಪ್ರತಿಯಾಗಿ, ಉತ್ತರ ಕೊರಿಯಾದ ಶಸ್ತ್ರಾಸ್ತ್ರ ಕಾರ್ಯಕ್ರಮಗಳನ್ನು ಹೆಚ್ಚಿಸಲು ರಶ್ಯ ಸಹಾಯ ಮಾಡುವುದು ನೇರ ಪ್ರಚೋದನೆಯಾಗಿದ್ದು ಇದನ್ನು ನೋಡಿಕೊಂಡು ತಾನು ಹಾಗೂ ಮಿತ್ರದೇಶಗಳು ಸುಮ್ಮನಿರಲು ಸಾಧ್ಯವಿಲ್ಲ ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಹೇಳಿದ್ದಾರೆ.
ಉತ್ತರ ಕೊರಿಯಾದ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳು ದಕ್ಷಿಣ ಕೊರಿಯಾಕ್ಕೆ ಅಸ್ತಿತ್ವಕ್ಕೆ ಅಪಾಯ ಮಾತ್ರವಲ್ಲ, ಇಂಡೊ-ಪೆಸಿಫಿಕ್ ವಲಯ ಹಾಗೂ ಜಗತ್ತಿನಾದ್ಯಂತ ಶಾಂತಿಗೆ ಗಂಭೀರ ಸವಾಲಾಗಿದೆ. ವಿಶ್ವಶಾಂತಿಯ ಅಂತಿಮ ಕಾವಲುಗಾರನೆಂದು ಸ್ವೀಕರಿಸಲಾಗಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯನು ಮತ್ತೊಂದು ಸಾರ್ವಭೌಮ ರಾಷ್ಟ್ರದ ಮೇಲೆ ಆಕ್ರಮಣ ಮಾಡುವ ಮೂಲಕ ಯುದ್ಧವನ್ನು ನಡೆಸುವುದು, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯವನ್ನು ಸ್ಪಷ್ಟವಾಗಿ ಉಲ್ಲಂಘಿಸುವ ದೇಶದಿಂದ ಶಸ್ತ್ರಾಸ್ತ್ರಗಳನ್ನು ಪಡೆಯುವುದು ವಿರೋಧಾಭಾಸವಾಗಿದೆ' ಎಂದವರು ಹೇಳಿದ್ದಾರೆ.
`ಉತ್ತರ ಕೊರಿಯಾದ ಶಸ್ತ್ರಾಸ್ತ್ರ ಕಾರ್ಯಕ್ರಮಗಳಿಗೆ ನೆರವಾಗುವ ಯಾವುದೇ ಚಟುವಟಿಕೆಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯದಡಿ ನಿಷೇಧಿಸಲ್ಪಟ್ಟಿವೆ. ರಶ್ಯವು ಭದ್ರತಾ ಮಂಡಳಿಯ ನಿರ್ಣಯವನ್ನು ಯಾವತ್ತೂ ಉಲ್ಲಂಘಿಸುವುದಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಆದರೆ ಉತ್ತರ ಕೊರಿಯಾ-ರಶ್ಯ ನಡುವೆ ಹಲವು ತಿಂಗಳಿಂದ ಮಿಲಿಟರಿ ವ್ಯವಹಾರ ನಡೆಯುತ್ತಿರುವುದನ್ನು ಗಮನಿಸಿದ್ದೇವೆ' ಎಂದು ಯೂನ್ ಸುಕ್ ಯಿಯೋಲ್ ಹೇಳಿದ್ದಾರೆ.