ಪರಮಾಣು ಶಕ್ತರ ನಡುವೆ ನೇರ ಸಂಘರ್ಷದ ಅಪಾಯ: ರಶ್ಯ, ಚೀನಾ ಎಚ್ಚರಿಕೆ
ಬೀಜಿಂಗ್: ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಯುದ್ಧದಲ್ಲಿ ಭಾಗಿಯಾಗಿರುವುದು ಗಂಭೀರ ಅಪಾಯವನ್ನು ಸೃಷ್ಟಿಸಿದೆ ಎಂದು ರಶ್ಯ ಮತ್ತು ಚೀನಾ ಎಚ್ಚರಿಕೆ ನೀಡಿವೆ.
ರವಿವಾರ ಆರಂಭಗೊಂಡಿರುವ ಚೀನಾದ ಮಿಲಿಟರಿ ರಾಜತಾಂತ್ರಿಕತೆಯ ಅತೀ ದೊಡ್ಡ ವಾರ್ಷಿಕ ಪ್ರದರ್ಶನ ‘ದಿ ಬೀಜಿಂಗ್ ಕ್ಸಿಯಾಂಗ್ಶಾನ್ ಫೋರಂ’ನ ಸಭೆಯಲ್ಲಿ ಮಾತನಾಡಿದ ರಶ್ಯದ ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು, ಉಕ್ರೇನ್ ಯುದ್ಧದಲ್ಲಿ ಶಾಮೀಲಾಗುವುದು ಭಾರೀ ಅಪಾಯ ಸೃಷ್ಟಿಸಿದೆ ಎಂದು ಪಾಶ್ಚಿಮಾತ್ಯ ದೇಶಗಳಿಗೆ ಎಚ್ಚರಿಕೆ ನೀಡಿದರು. ‘ರಶ್ಯ-ಉಕ್ರೇನ್ ಸಂಘರ್ಷವನ್ನು ನಿರಂತರ ಉಲ್ಬಣಗೊಳಿಸುವ ಪಾಶ್ಚಿಮಾತ್ಯರ ಕೃತ್ಯವು, ಪರಮಾಣು ಶಕ್ತಿಗಳ ನಡುವಿನ ನೇರ ಮಿಲಿಟರಿ ಸಂಘರ್ಷದ ಅಪಾಯವೊಡ್ಡಿದೆ ಮತ್ತು ಇದು ದುರಂತ ಪರಿಣಾಮವನ್ನು ಹೊಂದಿದೆ’ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಚೀನಾ ಸೆಂಟ್ರಲ್ ಮಿಲಿಟರಿ ಕಮಿಷನ್ ಉಪಾಧ್ಯಕ್ಷ ಝಾಂಗ್ ಯೂಕ್ಸಿಯಾ ‘ಕೆಲವು ದೇಶಗಳು ಚೀನಾ ಸರಕಾರವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ’ ಎಂದು ಪರೋಕ್ಷವಾಗಿ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದರು.
‘ ಚೀನಾವು ಅಮೆರಿಕದ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸಲು ಬಯಸುತ್ತದೆ. ರಶ್ಯದ ಜತೆಗಿನ ಕಾರ್ಯತಂತ್ರದ ಸಹಕಾರ ಮತ್ತು ಸಮನ್ವಯವನ್ನು ಗಾಢವಾಗಿಸುವ ಜತೆಗೆ, ಪರಸ್ಪರ ಗೌರವ, ಶಾಂತಿಯುತ ಸಹಬಾಳ್ವೆ ಮತ್ತು ಇಬ್ಬರಿಗೂ ಪ್ರಯೋಜನವಾಗುವ ಸಹಕಾರದ ಆಧಾರದ ಮೇಲೆ ಅಮೆರಿಕದ ಜತೆಗಿನ ಮಿಲಿಟರಿ ಸಂಬಂಧವನ್ನು ಅಭಿವೃದ್ಧಿಪಡಿಸಲು ಸಿದ್ಧರಿದ್ದೇವೆ’ ಎಂದು ಝಾಂಗ್ ಯೂಕ್ಸಿಯಾ ಹೇಳಿದರು. ಇದೇ ಸಂದರ್ಭ ಮಾತನಾಡಿದ ಚೀನಾ ರಕ್ಷಣಾ ಪಡೆಯ ಅಧಿಕಾರಿ ಲೆಜ ಹೆ ಲಿಯ್ ‘ ತೈವಾನ್ ವಿರುದ್ಧ ಚೀನಾವು ಬಲಪ್ರಯೋಗಿಸಬೇಕಾಗಿ ಬಂದರೆ ಅದು ಪುನರ್ಏಕೀಕರಣಕ್ಕಾಗಿ ನಡೆಯುವ ನ್ಯಾಯಸಮ್ಮತ ಯುದ್ಧವಾಗಲಿದೆ. ತೈವಾನ್ ಚೀನಾಕ್ಕೆ ಸಂಬಂಧಿಸಿದ ವಿಷಯವಾಗಿದೆ ಮತ್ತು ಯಾವುದೇ ಒಂದು ದೇಶಕ್ಕೆ ಸಂಬಂಧಿಸಿದ ಪ್ರಮುಖ ಮತ್ತು ಸೂಕ್ಷ್ಮ ವಿಷಯಗಳಲ್ಲಿ ಇತರ ದೇಶಗಳು ಮಧ್ಯಪ್ರವೇಶಿಸಬಾರದು’ ಎಂದರು.