ಚೀನಾ, ಉ.ಕೊರಿಯಾ ಜತೆ ಜಂಟಿ ಸಮರಾಭ್ಯಾಸಕ್ಕೆ ರಶ್ಯ ಪ್ರಸ್ತಾವ
ಮಾಸ್ಕೊ: ಚೀನಾ ಮತ್ತು ಉತ್ತರ ಕೊರಿಯಾದ ಜತೆ ಜಂಟಿಯಾಗಿ ನೌಕಾ ಸಮರಾಭ್ಯಾಸ ನಡೆಸುವ ಪ್ರಸ್ತಾವನೆಯನ್ನು ರಶ್ಯದ ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮುಂದಿಟ್ಟಿದ್ದಾರೆ ಎಂದು ಗುಪ್ತಚರ ವರದಿಯನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಯೊನ್ಹಾಪ್ ಸುದ್ಧಿಸಂಸ್ಥೆ ಸೋಮವಾರ ವರದಿ ಮಾಡಿದೆ.
ಕಳೆದ ಜುಲೈಯಲ್ಲಿ ಉತ್ತರ ಕೊರಿಯಾ ಆಯೋಜಿಸಿದ್ದ ವಿಜಯ ದಿನಾಚರಣೆ(ಕೊರಿಯಾ ಯುದ್ಧ ಅಂತ್ಯದ 70ನೇ ವಾರ್ಷಿಕ ದಿನ)ಯಲ್ಲಿ ಪಾಲ್ಗೊಂಡಿದ್ದ ರಶ್ಯದ ರಕ್ಷಣಾ ಸಚಿವರು ಈ ಸಂದರ್ಭ ಅಧ್ಯಕ್ಷ ಕಿಮ್‍ಜಾಂಗ್‍ರನ್ನು ಭೇಟಿಯಾಗಿದ್ದರು. ಭೇಟಿಯ ವೇಳೆ ಇಬ್ಬರೂ ಮುಖಂಡರು ಖಾಸಗಿ ಸಭೆ ನಡೆಸಿದಾಗ ಈ ಪ್ರಸ್ತಾವ ಮುಂದಿರಿಸಿದ್ದು ಉಭಯ ದೇಶಗಳ ನಡುವಿನ ರಕ್ಷಣಾ ವ್ಯವಹಾರದ ವಿಸ್ತರಣೆ ಬಗ್ಗೆ ಚರ್ಚಿಸಿದ್ದರು ಎಂದು ವರದಿ ಹೇಳಿದೆ.
ಉತ್ತರ ಕೊರಿಯಾದಿಂದ ಶಸ್ತ್ರಾಸ್ತ್ರ ಖರೀದಿಸುವ ಬಗ್ಗೆ ಚರ್ಚಿಸಲು ರಶ್ಯದ ರಕ್ಷಣಾ ಸಚಿವರು ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ್ದಾರೆ ಎಂದು ಕಳೆದ ತಿಂಗಳು ಅಮೆರಿಕದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಕಿರ್ಬಿ ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು. ಉ.ಕೊರಿಯಾ ಮತ್ತು ರಶ್ಯ ನಡುವೆ ಶಸ್ತ್ರಾಸ್ತ್ರ ವ್ಯವಹಾರ ನಡೆಸುತ್ತಿರುವ ಆರೋಪದ ಮೇಲೆ ಅಮೆರಿಕವು ಇತ್ತೀಚೆಗೆ ಮೂರು ಸಂಸ್ಥೆಗಳ ಮೇಲೆ ನಿರ್ಬಂಧ ಜಾರಿಗೊಳಿಸಿದೆ.