ಅಮೆರಿಕ: ಟ್ರಂಪ್ ರ‍್ಯಾಲಿಯಲ್ಲಿ ಗುಂಡಿನ ದಾಳಿ; ಇಬ್ಬರು ಮೃತ್ಯು

Update: 2024-07-14 02:19 GMT

Photo: x.com/llamalaikum

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರ‍್ಯಾಲಿಯಲ್ಲಿ ಗುಂಡಿನ ದಾಳಿ ನಡೆದು ಶಂಕಿತ ದಾಳಿಕೋರ ಮತ್ತು ಟ್ರಂಪ್ ಸಹಾಯಕರೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಶ್ವೇತಭವನದ ವಕ್ತಾರರು ಹೇಳಿಕೆ ನೀಡಿದ್ದಾರೆ.

ಪೆನ್ಸೆಲ್ವೇನಿಯಾದ ಬಟ್ಲರ್ ನಲ್ಲಿ ಶನಿವಾರ ಈ ದಾಳಿ ನಡೆದಿದ್ದು, ರ‍್ಯಾಲಿಯಲ್ಲಿ ಭಾಗವಹಿಸಿದ್ದವರ ಮುಂದೆ ನಿಂತಿರುವ ಟ್ರಂಪ್ ಅವರ ಬಲ ಕಿವಿ ಮತ್ತು ಮುಖದ ಮೇಲೆ ರಕ್ತ ಕಂಡುಬಂದಿದೆ.

ರಿಪಬ್ಲಿಕನ್ ನ್ಯಾಷನಲ್ ಸಮಾವೇಶಕ್ಕೆ ಮುನ್ನ ಟ್ರಂಪ್ ಅವರು ಗಡಿಯನ್ನು ಅಕ್ರಮವಾಗಿ ದಾಟುತ್ತಿರುವವರ ಬಗೆಗಿನ ಅಂಕಿ ಅಂಶಗಳ ಚಾರ್ಟ್ ವಿವರಿಸುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರ ಕಡೆಯಿಂದ ದೊಡ್ಡ ಸದ್ದು ಕೇಳಿಬಂತು. ನಂತರ ಟ್ರಂಪ್ ಅವರು ತಮ್ಮ ಕತ್ತನ್ನು ಬಲಗೈಯಿಂದ ಮುಟ್ಟಿ ನೋಡಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.

ತಕ್ಷಣ ಅವರ ಭದ್ರತಾ ಸಿಬ್ಬಂದಿ ವೇದಿಕೆಗೆ ಧಾವಿಸಿದ್ದು, ಅವರು ಮರೆಗೆ ಸರಿದಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಂಡ ಸಾವಿರಾರು ಮಂದಿಯಿಂದ ದೊಡ್ಡ ಚೀರಾಟ ಕೇಳಿಸುತ್ತಿತ್ತು. ಅವರ ಭದ್ರತಾ ಸಹಾಯಕರು ವೇದಿಕೆಗೆ ಬಂದಾಗಲೂ ದೊಡ್ಡ ಸದ್ದು ಕೇಳಿಬಂದಿದೆ.

ಪೋಡಿಯಂನಿಂದ ಟ್ರಂಪ್ ತೆರಳಿದ ತಕ್ಷಣವೇ ಕಾನೂನು ಜಾರಿ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದ್ದಾರೆ. ಭದ್ರತಾ ಸಿಬ್ಬಂದಿ ಟ್ರಂಪ್ ಅವರನ್ನು ವೇದಿಕೆಯಿಂದಾಚೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. "ಪೆನ್ಸೆಲ್ವೇನಿಯಾದಲ್ಲಿ ಟ್ರಂಪ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ರಹಸ್ಯ ಸೇವೆಗಳ ವಿಭಾಗ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ. ಟ್ರಂಪ್ ಸುರಕ್ಷಿತವಾಗಿದ್ದಾರೆ. ತನಿಖೆ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿಯನ್ನು ಶೀಘ್ರದಲ್ಲಿ ನೀಡಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News