ದಕ್ಷಿಣ ಕೊರಿಯಾದಲ್ಲಿ ತುರ್ತು ಮಿಲಿಟರಿ ಆಡಳಿತ ಘೋಷಣೆ
ಸಿಯೋಲ್ : ವಿಪಕ್ಷಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ ಎಂದು ಆರೋಪಿಸಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ದೇಶದಲ್ಲಿ ತುರ್ತು ಮಿಲಿಟರಿ ಆಡಳಿತ ಘೋಷಿಸಿದ್ದಾರೆ.
ಸೇನಾಡಳಿತದ ಮೂಲಕ ಮುಕ್ತ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರವನ್ನು ಮರು ನಿರ್ಮಿಸುವುದಾಗಿ ಅವರು ಹೇಳಿದ್ದಾರೆ. ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳಿಂದ ಎದುರಾಗಿರುವ ಬೆದರಿಕೆಯಿಂದ ಸ್ವತಂತ್ರ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ದೇಶ ವಿರೋಧಿ ಶಕ್ತಿಗಳನ್ನು ನಿವಾರಿಸಲು ದೇಶದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಜಾರಿಗೊಳಿಸಲಾಗುವುದು ಎಂದು ಟಿವಿ ವಾಹಿನಿಯ ಮೂಲಕ ಘೋಷಿಸಿದ್ದಾರೆ.
ಜನರ ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ಖಾತರಿಪಡಿಸಲು ಇದು ಅನಿವಾರ್ಯ ಕ್ರಮವಾಗಿದೆ. ರಾಷ್ಟ್ರೀಯ ಸಂಸತ್ತು ಕೂಡಾ ಮಾದಕ ವಸ್ತು ಅಪರಾಧ ತಡೆಗಟ್ಟಲು, ನಾಗರಿಕರ ಸುರಕ್ಷತೆ ಕ್ರಮಗಳಿಗೆ ನಿಗದಿಯಾಗಿದ್ದ ಬಜೆಟ್ ಅನುದಾನವನ್ನು ಕಡಿತಗೊಳಿಸಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕ್ರಮ ಕೈಗೊಂಡಿರುವುದಾಗಿ ಯೂನ್ ಸುಕ್ ಹೇಳಿದ್ದಾರೆ. ಈ ಕ್ರಮವನ್ನು ಜನತೆಯ ಜತೆ ಸೇರಿ ವಿರೋಧಿಸುವುದಾಗಿ ಆಡಳಿತಾರೂಢ ಕನ್ಸರ್ವೇಟಿವ್ ಪೀಪಲ್ ಪವರ್ ಪಾರ್ಟಿಯ ಮುಖಂಡ ಹಾನ್ ಡಾಂಗ್ ಹೂನ್ ಪ್ರತಿಕ್ರಿಯಿಸಿದ್ದಾರೆ.