ಭಾರತದೊಂದಿಗೆ ಸೌಹಾರ್ದ ಸಂಬಂಧ ಬಯಸುತ್ತೇವೆ : ಬಾಂಗ್ಲಾ
ಢಾಕಾ : ಬಾಂಗ್ಲಾದೇಶವು ಪರಸ್ಪರ ಹಿತಾಸಕ್ತಿಗಳ ಆಧಾರದ ಮೇಲೆ ಭಾರತದೊಂದಿಗೆ ಸಾಮಾನ್ಯ ಮತ್ತು ಸ್ನೇಹಪರ ಸಂಬಂಧವನ್ನು ಬಯಸುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಲಹೆಗಾರ ಮುಹಮ್ಮದ್ ತೌಹೀದ್ ಹುಸೇನ್ ಹೇಳಿದ್ದಾರೆ.
ಢಾಕಾದಲ್ಲಿ ವಿದೇಶಿ ರಾಜತಾಂತ್ರಿಕರ ಜತೆ ನಡೆಸಿದ ಸಭೆಯಲ್ಲಿ ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು, ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯ ವರದಿಯ ಬಗ್ಗೆ ಅವರು ಮಾಹಿತಿ ನೀಡಿದರು ಎಂದು `ದಿ ಡೈಲಿ ಸ್ಟಾರ್' ವರದಿ ಮಾಡಿದೆ. `ಅಲ್ಪಸಂಖ್ಯಾತರ ಮೇಲಿನ ದಾಳಿಯ ಘಟನೆ ನಡೆದಿಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ ಅವು ಪ್ರತ್ಯೇಕವಾಗಿರುತ್ತದೆ ಮತ್ತು ಹೆಚ್ಚು ಕಡಿಮೆ ಎಲ್ಲಾ ಆಡಳಿತಗಳಲ್ಲೂ ಸಂಭವಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯನ್ನು ನಿಯೋಜಿಸಬೇಕು ಮತ್ತು ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಹುಸೇನ್ ` ನಾನು ಇದನ್ನು ಮಮತಾ ರೀತಿಯ ಹೇಳಿಕೆಯಾಗಿ ಪರಿಗಣಿಸುತ್ತೇನೆ. ಅವರು ಯಾಕೆ ಇಂತಹ ಹೇಳಿಕೆ ನೀಡಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಎಂದಿನಂತೆಯೇ ಇದು ಅವರ ವೈಯಕ್ತಿಕ ಅಭಿಪ್ರಾಯವೆಂದು ಪರಿಗಣಿಸಬಹುದು' ಎಂದರು.
► ಅಗರ್ತಲಾದಲ್ಲಿ ಬಾಂಗ್ಲಾ ಹೈಕಮಿಷನ್ ಮೇಲಿನ ದಾಳಿಯ ತನಿಖೆಗೆ ಆಗ್ರಹ
ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಬಾಂಗ್ಲಾದೇಶದ ಹೈಕಮಿಷನ್ ಮೇಲೆ ಸೋಮವಾರ ನಡೆದ ದಾಳಿಯ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು ಎಂದು ಬಾಂಗ್ಲಾದೇಶದ ವಿದೇಶಾಂಗ ಇಲಾಖೆ ಮಂಗಳವಾರ ಆಗ್ರಹಿಸಿದೆ.
ಢಾಕಾದಲ್ಲಿ ಇಸ್ಕಾನ್‍ನ ಮಾಜಿ ಸದಸ್ಯ ಚಿನ್ಮಯ್ ಕೃಷ್ಣದಾಸ್ ಬಂಧನವನ್ನು ವಿರೋಧಿಸಿ ಸೋಮವಾರ ಅಗರ್ತಲದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿ ಸಂದರ್ಭ ಬಾಂಗ್ಲಾ ಹೈಕಮಿಷನ್ ಮೇಲೆ ದಾಳಿ ನಡೆದಿತ್ತು. ` ಪೂರ್ವ ಯೋಜಿತ ರೀತಿಯಲ್ಲಿ ಬಾಂಗ್ಲಾದೇಶದ ಅಸಿಸ್ಟೆಂಟ್ ಹೈಕಮಿಷನ್‍ನ ಮುಖ್ಯ ದ್ವಾರವನ್ನು ಮುರಿದು ಆವರಣದೊಳಗೆ ಪ್ರವೇಶಿಸಿ ದಾಂಧಲೆ ಎಸಗಲು ಅನುಮತಿಸಿರುವ ಬಗ್ಗೆ ಮಾಹಿತಿಯಿದೆ' ಎಂದು ಇಲಾಖೆ ಆರೋಪಿಸಿದೆ.
►ಭಾರತದ ರಾಯಭಾರಿಗೆ ಬಾಂಗ್ಲಾದೇಶ ಸಮನ್ಸ್
ಅಗರ್ತಲಾದಲ್ಲಿ ಬಾಂಗ್ಲಾದೇಶದ ಅಸಿಸ್ಟೆಂಟ್ ಹೈಕಮಿಷನ್‍ನಲ್ಲಿ ಭದ್ರತೆಯ ಉಲ್ಲಂಘನೆ ಘಟನೆಯ ಬಗ್ಗೆ ಬಾಂಗ್ಲಾದಲ್ಲಿ ಭಾರತದ ಹೈಕಮಿಷನರ್ ಪ್ರಣಯ್ ಕುಮಾರ್ ವರ್ಮರನ್ನು ಬಾಂಗ್ಲಾದ ವಿದೇಶಾಂಗ ಇಲಾಖೆ ಮಂಗಳವಾರ ಕರೆಸಿಕೊಂಡು ಖಂಡನೆ ವ್ಯಕ್ತಪಡಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿದೇಶಾಂಗ ಇಲಾಖೆ ಕಚೇರಿಗೆ ಮಂಗಳವಾರ ಸಂಜೆ ಸುಮಾರು 4 ಗಂಟೆಗೆ ವರ್ಮ ಆಗಮಿಸಿದರು. ಬಳಿಕ ಉಸ್ತುವಾರಿ ವಿದೇಶಾಂಗ ಕಾರ್ಯದರ್ಶಿ ಮುಹಮ್ಮದ್ ರಿಯಾಝ್ ಹಮೀದುಲ್ಲಾರ ಜತೆ ಮಾತುಕತೆ ನಡೆಸಿದರು ಎಂದು ವರದಿ ಹೇಳಿದೆ. ಯಾವುದೇ ರೀತಿಯ ದಾಳಿಯಿಂದ ರಾಜತಾಂತ್ರಿಕ ನಿಯೋಗ, ಕಾರ್ಯಗಳನ್ನು ರಕ್ಷಿಸುವುದು ಆತಿಥೇಯ ಸರ್ಕಾರದ ಜವಾಬ್ದಾರಿಯಾದ್ದರಿಂದ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಭಾರತ ಸರಕಾರವನ್ನು ಆಗ್ರಹಿಸಿರುವುದಾಗಿ ವಿದೇಶಾಂಗ ಇಲಾಖೆ ಹೇಳಿದೆ.
► ಭಾರತೀಯ ಟಿವಿ ಚಾನೆಲ್ ನಿಷೇಧಕ್ಕೆ ಬಾಂಗ್ಲಾ ಹೈಕೋರ್ಟ್‍ಗೆ ಅರ್ಜಿ
ಬಾಂಗ್ಲಾದೇಶದಲ್ಲಿ ಭಾರತದ ಎಲ್ಲಾ ಟಿವಿ ಚಾನೆಲ್‍ಗಳ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಬಾಂಗ್ಲಾದೇಶದ ಹೈಕೋರ್ಟ್‍ಗೆ ಮಂಗಳವಾರ ಅರ್ಜಿ ಸಲ್ಲಿಸಿರುವುದಾಗಿ `ದಿ ಡೈಲಿ ಸ್ಟಾರ್' ವರದಿ ಮಾಡಿದೆ.
ಭಾರತೀಯ ಟಿವಿ ಚಾನೆಲ್‍ಗಳು ಬಾಂಗ್ಲಾದೇಶದ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಇಂತಹ ಚಾನೆಲ್‍ಗಳು ಎರಡೂ ದೇಶಗಳ ನಡುವಿನ ಸೌಹಾರ್ದ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಮತ್ತು ಬಾಂಗ್ಲಾದೇಶದ ಸಾರ್ವಭೌಮತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಸುಪ್ರೀಂಕೋರ್ಟ್ ವಕೀಲರು ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿಯನ್ನು ಮುಂದಿನ ವಾರ ವಿಚಾರಣೆಗೆ ಎತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.