ಗಾಝಾ ಕದನ ವಿರಾಮ | ಮೂರು ಹಂತದ ಒಪ್ಪಂದ ಪ್ರಸ್ತುತಪಡಿಸಿದ ಖತರ್

Update: 2025-01-14 16:29 GMT

ಸಾಂದರ್ಭಿಕ ಚಿತ್ರ | PC : PTI

ದೋಹ : ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಝಾದಲ್ಲಿ 15 ತಿಂಗಳುಗಳಿಂದ ಮುಂದುವರಿದಿರುವ ಯುದ್ಧವನ್ನು ಅಂತ್ಯಗೊಳಿಸುವ ಮೊದಲ ಹೆಜ್ಜೆಯಾಗಿ ಗಾಝಾದಲ್ಲಿನ ಒತ್ತೆಯಾಳುಗಳನ್ನು ಫೆಲೆಸ್ತೀನಿಯನ್ ಕೈದಿಗಳ ಜತೆ ವಿನಿಮುಯ ಮಾಡಿಕೊಳ್ಳುವ ಒಪ್ಪಂದದ ಕರಡು ಪ್ರಸ್ತಾವನೆಯನ್ನು ಇಸ್ರೇಲ್ ಮತ್ತು ಹಮಾಸ್‍ಗೆ ಖತರ್ ರವಾನಿಸಿದೆ.

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳಲು ಕೇವಲ ಒಂದು ವಾರ ಇರುವಾಗ, ದೋಹಾದಲ್ಲಿ ನಡೆದ ಮಾತುಕತೆಯಲ್ಲಿ ಪ್ರಗತಿ ಸಾಧಿಸಲಾಗಿದೆ ಮತ್ತು ಒಪ್ಪಂದವು ಅಂತಿಮಗೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

►ಕರಡು ಒಪ್ಪಂದದ ಪ್ರಮುಖ ಅಂಶಗಳು ಹೀಗಿವೆ:

ಪ್ರಥಮ ಹಂತ: ಪ್ರಥಮ ಹಂತದಲ್ಲಿ 33 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗುವುದು. ಇದರಲ್ಲಿ ಮಕ್ಕಳು, ಮಹಿಳೆಯರು, ಮಹಿಳಾ ಯೋಧರು, ಗಾಯಾಳುಗಳು ಹಾಗೂ ಅನಾರೋಗ್ಯ ಪೀಡಿತರು ಸೇರಿರುತ್ತಾರೆ. ಬಹುತೇಕ ಒತ್ತೆಯಾಳುಗಳು ಜೀವಂತವಿರುವುದಾಗಿ ಇಸ್ರೇಲ್ ನಂಬಿದೆ. ಆದರೆ ಹಮಾಸ್‍ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಪ್ರಥಮ ಹಂತವು ಯೋಜಿತ ರೀತಿಯಲ್ಲಿಯೇ ಮುಂದುವರಿದರೆ, ಒಪ್ಪಂದ ಜಾರಿಗೊಂಡ 16ನೇ ದಿನದಿಂದ ಎರಡನೇ ಹಂತದ ಬಗ್ಗೆ ಮಾತುಕತೆ ಆರಂಭಗೊಳ್ಳಲಿದೆ. ಈ ಹಂತದಲ್ಲಿ ಜೀವಂತವಾಗಿ ಉಳಿದಿರುವ ಒತ್ತೆಯಾಳುಗಳ ಬಿಡುಗಡೆ, ಸಾವನ್ನಪ್ಪಿರುವ ಒತ್ತೆಯಾಳುಗಳ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು.

ಪಡೆ ಹಿಂತೆಗೆದುಕೊಳ್ಳುವಿಕೆ: ಇಸ್ರೇಲಿ ಗಡಿ ಪಟ್ಟಣಗಳು ಮತ್ತು ಹಳ್ಳಿಗಳನ್ನು ರಕ್ಷಿಸಲು ಇಸ್ರೇಲಿ ಪಡೆಗಳು ಗಡಿ ಪರಿಧಿಯಲ್ಲಿ ಉಳಿಯುವುದರೊಂದಿಗೆ ವಾಪಸಾತಿ ಹಂತಹಂತವಾಗಿ ನಡೆಯಲಿದೆ. ಜತೆಗೆ, ಫಿಲಡೆಲ್ಫಿ ಕಾರಿಡಾರ್‍ನಲ್ಲಿ, ಗಾಝಾದ ದಕ್ಷಿಣ ಅಂಚಿನಲ್ಲಿ ಭದ್ರತಾ ವ್ಯವಸ್ಥೆಗಳು ಇರುತ್ತವೆ. ಒಪ್ಪಂದದ ಕೆಲ ದಿನಗಳ ಬಳಿಕ ಇಲ್ಲಿಯ ಕೆಲವು ಭಾಗಗಳಿಂದ ಇಸ್ರೇಲ್ ಪಡೆ ಹಿಂದೆ ಸರಿಯಲಿದೆ.

ಆಯುಧ ಹೊಂದಿರದ ಗಾಝಾ ನಿವಾಸಿಗಳನ್ನು ಹಿಂದಿರುಗಲು ಅನುಮತಿಸಲಾಗುವುದು. ಯಾವುದೇ ಶಸ್ತ್ರಾಸ್ತ್ರಗಳು ಗಾಝಾಕ್ಕೆ ಸ್ಥಳಾಂತರವಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಯಾಂತ್ರಿಕ ವ್ಯವಸ್ಥೆಯಿದೆ. ಇಸ್ರೇಲಿ ಪಡೆಗಳನ್ನು ಮಧ್ಯ ಗಾಝಾದ ನೆಟ್‍ಝಾರಿಮ್ ಕಾರಿಡಾರ್‍ನಿಂದ ಹಿಂದಕ್ಕೆ ಕರೆಸಿಕೊಳ್ಳಲಾಗುವುದು.

ಕೊಲೆ, ಮಾರಣಾಂತಿಕ ದಾಳಿ ನಡೆಸಿದ್ದಕ್ಕೆ ಶಿಕ್ಷೆಗೆ ಗುರಿಯಾದ ಫೆಲಸ್ತೀನಿಯನ್ ಸಶಸ್ತ್ರ ಹೋರಾಟಗಾರರನ್ನೂ ಇಸ್ರೇಲ್ ಬಿಡುಗಡೆಗೊಳಿಸಲಿದೆ. ಆದರೆ ಇದು ಜೀವಂತ ಇರುವ ಒತ್ತೆಯಾಳುಗಳ ಸಂಖ್ಯೆಯನ್ನು ಅವಲಂಬಿಸಿದೆ. ಕೈದಿಗಳನ್ನು ಪಶ್ಚಿಮದಂಡೆಗೆ ಬಿಡುಗಡೆಗೊಳಿಸುವುದಿಲ್ಲ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ದಾಳಿಯಲ್ಲಿ ಪಾಲ್ಗೊಂಡಿದ್ದ ಹಮಾಸ್ ಹೋರಾಟಗಾರರನ್ನು ಬಿಡುಗಡೆ ಮಾಡುವುದಿಲ್ಲ.

ಮಾನವೀಯ ನೆರವು ಹೆಚ್ಚಳ: ಗಾಝಾ ಪಟ್ಟಿಗೆ ಮಾನವೀಯ ನೆರವಿನಲ್ಲಿ ಗಮನಾರ್ಹ ಪ್ರಮಾಣದ ಹೆಚ್ಚಳವಾಗಲಿದೆ. ಇಲ್ಲಿನ ಜನತೆ ತೀವ್ರವಾದ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆ ಸೇರಿದಂತೆ ಅಂತರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಸಿವೆ. ಗಾಝಾ ಪಟ್ಟಿಗೆ ನೆರವು ಪೂರೈಸಲು ಇಸ್ರೇಲ್ ಅನುಮತಿಸಿದೆ. ಆದರೆ ಕ್ರಿಮಿನಲ್ ಗ್ಯಾಂಗ್‍ಗಳು ಅಂತರಾಷ್ಟ್ರೀಯ ನೆರವನ್ನು ಲೂಟಿ ಮಾಡುವ ಪ್ರಕರಣ ಹೆಚ್ಚಿರುವುದರಿಂದ ನೆರವು ಪೂರೈಕೆ ಪ್ರಮಾಣ ಮತ್ತು ವಿಧಾನದ ಬಗ್ಗೆ ವಿವಾದವಿದೆ.

► ಗಾಝಾದ ಭವಿಷ್ಯದ ಆಡಳಿತ

ಯುದ್ಧ ಅಂತ್ಯಗೊಂಡ ಬಳಿಕ ಗಾಝಾದಲ್ಲಿ ಯಾರು ಆಡಳಿತ ನಡೆಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇದುವರೆಗೂ ನಿಗೂಢವಾಗಿಯೇ ಉಳಿದಿದ್ದು ಕರಡು ಒಪ್ಪಂದದಲ್ಲೂ ಈ ಕುರಿತ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ. ಯುದ್ಧ ಅಂತ್ಯಗೊಂಡ ಬಳಿಕ ಹಮಾಸ್‍ಗೆ ಗಾಝಾದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಪಟ್ಟುಹಿಡಿದಿರುವ ಇಸ್ರೇಲ್, ಫೆಲೆಸ್ತೀನ್ ಪ್ರಾಧಿಕಾರದ(ಪಿಎ) ಪಾತ್ರವನ್ನೂ ವಿರೋಧಿಸುತ್ತಿದೆ. ಯುದ್ಧ ಅಂತ್ಯಗೊಂಡ ಬಳಿಕ ಗಾಝಾ ಪಟ್ಟಿಯಲ್ಲಿನ ಭದ್ರತೆಯ ನಿಯಂತ್ರಣ ತನ್ನ ಕೈಯಲ್ಲಿ ಇರಬೇಕು ಎಂದು ಇಸ್ರೇಲ್ ಪ್ರತಿಪಾದಿಸುತ್ತಿದೆ.

ಗಾಝಾವನ್ನು ಫೆಲೆಸ್ತೀನೀಯರು ಆಳಬೇಕು ಎಂದು ಅಂತರಾಷ್ಟ್ರೀಯ ಸಮುದಾಯ ಹೇಳುತ್ತಿದೆ. ಆದರೆ ನಾಗರಿಕ ಸಮಾಜ ಅಥವಾ ಸ್ಥಳೀಯ ಸಮುದಾಯದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವ ಪ್ರಯತ್ನ ಇದುವರೆಗೆ ಫಲ ನೀಡಿಲ್ಲ.

ಈ ಮಧ್ಯೆ, ಗಾಝಾದಲ್ಲಿ ತಾತ್ಕಾಲಿಕ ಆಡಳಿತದ ಬಗ್ಗೆ ಇಸ್ರೇಲ್, ಯುಎಇ ಮತ್ತು ಅಮೆರಿಕ ನಡುವೆ ಚರ್ಚೆಗಳು ನಡೆದಿವೆ. ಸುಧಾರಿತ ಫೆಲೆಸ್ತೀನ್ ಪ್ರಾಧಿಕಾರವು ಅಧಿಕಾರ ವಹಿಸಿಕೊಳ್ಳುವವರೆಗೆ ಗಾಝಾದಲ್ಲಿ ಆಡಳಿತ ನಡೆಸುವ ತಾತ್ಕಾಲಿಕ ವ್ಯವಸ್ಥೆಯ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.

6 ವಾರಗಳ ಅವಧಿಯಲ್ಲಿ 33 ಒತ್ತೆಯಾಳುಗಳ ಬಿಡುಗಡೆಯೊಂದಿಗೆ ಆರಂಭವಾಗುತ್ತದೆ. 33 ಒತ್ತೆಯಾಳುಗಳಲ್ಲಿ ಇಸ್ರೇಲ್‍ನ ಐದು ಮಹಿಳಾ ಯೋಧರಿದ್ದಾರೆ. ಇವರಲ್ಲಿ ಪ್ರತಿಯೊಬ್ಬ ಮಹಿಳಾ ಯೋಧರ ಬಿಡುಗಡೆಗೆ ಪ್ರತಿಯಾಗಿ 50 ಫೆಲೆಸ್ತೀನಿಯನ್ ಕೈದಿಗಳನ್ನು ಬಿಡುಗೆಗೊಳಿಸಲಾಗುವುದು. ಮೊದಲ ಹಂತದ ಪರಿಣಾಮವನ್ನು ಆಧರಿಸಿ ಎರಡನೇ ಮತ್ತು ಮೂರನೇ ಹಂತವನ್ನು ನಿರ್ಧರಿಸಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News