ಐಸಿಜೆ ನ್ಯಾಯಾಧೀಶ ನವಾಫ್ ಸಲಾಂ ಲೆಬನಾನ್ ನ ನೂತನ ಪ್ರಧಾನಿ
Update: 2025-01-14 16:05 GMT
ಬೈರೂತ್ : ಲೆಬನಾನ್‍ನ ಪ್ರಮುಖ ರಾಜತಾಂತ್ರಿಕ ಮತ್ತು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಜೆ) ನ್ಯಾಯಾಧೀಶ ನವಾಫ್ ಸಲಾಂ ಲೆಬನಾನ್‍ನ ನೂತನ ಪ್ರಧಾನಿಯಾಗಿ ಆಯ್ಕೆಗೊಂಡಿರುವುದಾಗಿ ವರದಿಯಾಗಿದೆ.
ಸಲಾಂ ಅವರು ಪ್ರಸ್ತುತ ಐಸಿಜೆಯ ಮುಖ್ಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೆಬನಾನ್ ಸಂಸತ್‍ನಲ್ಲಿ ನಡೆದ ಅಧಿವೇಶನದಲ್ಲಿ ಪ್ರಧಾನಿ ಹುದ್ದೆಗೆ ಸಲಾಂ ಹೆಸರನ್ನು ಪಾಶ್ಚಿಮಾತ್ಯ ಬೆಂಬಲಿತ ಪಕ್ಷಗಳು ಹಾಗೂ ಪಕ್ಷೇತರರು ನಾಮನಿರ್ದೇಶನ ಮಾಡಿದರು. ಸಲಾಂ ಅವರು ಸೌದಿ ಅರೆಬಿಯಾ ಹಾಗೂ ಪಾಶ್ಚಿಮಾತ್ಯ ದೇಶಗಳ ಬೆಂಬಲ ಪಡೆದಿದ್ದಾರೆ. ಪ್ರಧಾನಿಯಾಗಿ ಸಲಾಂ ಆಯ್ಕೆಗೊಂಡಿರುವುದು ಲೆಬನಾನ್‍ನ ಮತ್ತೊಂದು ಪ್ರಮುಖ ಗುಂಪಾಗಿರುವ ಹಿಜ್ಬುಲ್ಲಾಗೆ ಭಾರೀ ಹಿನ್ನಡೆ ಎಂದು ಪರಿಗಣಿಸಲಾಗಿದೆ. 128 ಸದಸ್ಯ ಬಲದ ಸಂಸತ್‍ನಲ್ಲಿ 73 ಸದಸ್ಯರು ಸಲಾಂರನ್ನು ಬೆಂಬಲಿಸಿದ್ದು ಪ್ರಧಾನಿಯಾಗಿ ಅವರ ಹೆಸರನ್ನು ಅಧ್ಯಕ್ಷರು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.