ಕ್ಯಾಲಿಫೋರ್ನಿಯಾ: ಕಾಡ್ಗಿಚ್ಚು ನಿಯಂತ್ರಣಕ್ಕೆ ನೆರವಾಗುವ ಕೈದಿಗಳ ಶಿಕ್ಷೆಯಲ್ಲಿ ರಿಯಾಯಿತಿ

Update: 2025-01-13 14:54 GMT

PC : PTI 

ನ್ಯೂಯಾರ್ಕ್: ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಭೀಕರ ಸ್ವರೂಪ ಪಡೆದುಕೊಂಡಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ನಿರಂತರ ಕಾರ್ಯಾಚರಣೆ ಮುಂದುವರಿಯುತ್ತಿರುವಂತೆಯೇ, ದುರಂತವನ್ನು ಎದುರಿಸಲು ಅಧಿಕಾರಿಗಳು ಒಂದು ವಿಶಿಷ್ಟ ಕ್ರಮವೊಂದನ್ನು ಘೋಷಿಸಿದ್ದಾರೆ.

ಕಾಡ್ಗಿಚ್ಚು ನಿಯಂತ್ರಣ ಕಾರ್ಯಕ್ಕೆ ಕೈ ಜೋಡಿಸುವ ಕೈದಿಗಳಿಗೆ ಶಿಕ್ಷೆಯ ಅವಧಿ ಕಡಿತ ಮತ್ತು ಸಂಬಳದ ಕೊಡುಗೆಯನ್ನು `ಕ್ಯಾಲಿಫೋರ್ನಿಯಾದ ಸುಧಾರಣೆ ಮತ್ತು ಪುನರ್ವಸತಿ ಇಲಾಖೆ' ಮುಂದಿರಿಸಿರುವುದಾಗಿ ಸಿಎನ್‍ಎನ್ ವರದಿ ಮಾಡಿದೆ.

ಲಾಸ್ ಏಂಜಲೀಸ್‌ ನಲ್ಲಿ ಕೈದಿಗಳು ಅಗ್ನಿಶಾಮಕ ಸಿಬ್ಬಂದಿಗಳ ಜತೆ ಕೆಲಸ ಮಾಡುತ್ತಾ ಬೆಂಕಿ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ. 931 ಕೈದಿಗಳು ಬೆಂಕಿ ನಿಯಂತ್ರಿಸುವ ಕಾರ್ಯದಲ್ಲಿ ಕೈಜೋಡಿಸಿದ್ದು 3 ಪಾಳಿಗಳಲ್ಲಿ ದುಡಿಯುತ್ತಿದ್ದಾರೆ. ವಿನಾಶಕಾರಿ ಕಾಡ್ಗಿಚ್ಚನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೈದಿಗಳಿಗೆ ಅವರ ಕೌಶಲ್ಯ ಮತ್ತು ಅನುಭವದ ಆಧಾರದ ಮೇಲೆ ದಿನಕ್ಕೆ 5.80 ಡಾಲರ್ ನಿಂದ 10.24 ಡಾಲರ್ ವರೆಗೆ ವೇತನ ನೀಡಲಾಗುತ್ತಿದೆ. ಕಾಡ್ಗಿಚ್ಚು ನಿಯಂತ್ರಣದಲ್ಲಿ ನೇರವಾಗಿ ಕೈಜೋಡಿಸಿದ ಕೈದಿಗಳಿಗೆ ` ಎರಡು ದಿನಕ್ಕೆ ಒಂದು' ಕ್ರೆಡಿಟ್ ವ್ಯವಸ್ಥೆಯಡಿ, ಒಂದು ದಿನದ ಕೆಲಸಕ್ಕೆ ಶಿಕ್ಷೆಯಲ್ಲಿ 2 ದಿನದ ರಿಯಾಯಿತಿ ಲಭಿಸಲಿದೆ. ಅಂದರೆ 1 ದಿನದ ಕಾರ್ಯಾಚರಣೆಗೆ ಶಿಕ್ಷೆಯಲ್ಲಿ 1 ದಿನದ ರಿಯಾಯಿತಿ ಸಿಗಲಿದೆ.

ಈ ಮಧ್ಯೆ, ಲಾಸ್ ಏಂಜಲೀಸ್ ನಗರದಲ್ಲಿ ಕಳೆದ ಮಂಗಳವಾರ ಕಾಣಿಸಿಕೊಂಡಿದ್ದ ಕಾಡ್ಗಿಚ್ಚನ್ನು ನಿಯಂತ್ರಿಸಲು ಅಗ್ನಿಶಾಮಕ ದಳ ಮತ್ತು ರಕ್ಷಣಾ ಕಾರ್ಯಕರ್ತರು ಪ್ರಯತ್ನ ಮುಂದುವರಿಸಿರುವಂತೆಯೇ ಕಾಡ್ಗಿಚ್ಚಿನಿಂದ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿರುವುದಾಗಿ ವರದಿಯಾಗಿದೆ.

ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಕಾಡ್ಗಿಚ್ಚು ಬಿರುಗಾಳಿಯಿಂದಾಗಿ ಕ್ಷಿಪ್ರಗತಿಯಲ್ಲಿ ಹರಡಿದ್ದು ಸ್ಯಾನ್‍ಫ್ರಾನ್ಸಿಸ್ಕೋ ನಗರಕ್ಕಿಂತ ದೊಡ್ಡ ಪ್ರಮಾಣದ ಭೂಪ್ರದೇಶವನ್ನು ಸುಟ್ಟುಹಾಕಿದೆ. 12,000ಕ್ಕೂ ಅಧಿಕ ಕಟ್ಟಡಗಳಿಗೆ ಹಾನಿಯಾಗಿದ್ದು ಸಾವಿರಾರು ಮಂದಿ ಸುರಕ್ಷಿತ ಪ್ರದೇಶಕ್ಕೆ ಧಾವಿಸಿದ್ದಾರೆ. ಬೆಂಕಿಯ ಜ್ವಾಲೆಗಳು ಲಾಸ್ ಏಂಜಲೀಸ್‌ ನ ಅಕ್ಕಪಕ್ಕದ ನಗರಗಳಲ್ಲಿನ ಹಲವು ಜನನಿಬಿಡ ಪ್ರದೇಶಗಳಿಗೆ ವ್ಯಾಪಿಸಿದ್ದು ಸುಮಾರು 1,50,000 ಜನರನ್ನು ಸ್ಥಳಾಂತರಿಸಲಾಗಿದೆ. 9 ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಲಾಗಿದ್ದು ಕ್ಯಾಲಿಫೋರ್ನಿಯಾದಲ್ಲಿ 70,000 ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮೊಟಕುಗೊಂಡಿದೆ. ಈ ಪ್ರದೇಶಾದ್ಯಂತ ಒಳಚರಂಡಿ, ನೀರು ಮತ್ತು ವಿದ್ಯುತ್ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News