ಯುದ್ಧವನ್ನು ನಿಲ್ಲಿಸುವ ಗಾಝಾ ಒಪ್ಪಂದವನ್ನು ಬೆಂಬಲಿಸುವುದಿಲ್ಲ: ಇಸ್ರೇಲ್ ವಿತ್ತ ಸಚಿವ
ಜೆರುಸಲೇಂ: ಯುದ್ಧವನ್ನು ನಿಲ್ಲಿಸುವ ಗಾಝಾ ಒಪ್ಪಂದವನ್ನು ತಾನು ಬೆಂಬಲಿಸುವುದಿಲ್ಲ. ಫೆಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ನರಕದ ಬಾಗಿಲನ್ನು ತೆರೆಯಬೇಕು ಎಂದು ಇಸ್ರೇಲ್ ನ ಕಟ್ಟಾ ಬಲಪಂಥೀಯ ವಿತ್ತಸಚಿವ ಬೆಝಲೆಲ್ ಸ್ಮೊಟ್ರಿಚ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತಾವಿತ ಒಪ್ಪಂದವು ಇಸ್ರೇಲ್ ನ ರಾಷ್ಟ್ರೀಯ ಭದ್ರತೆಗೆ ಒಂದು ದುರಂತವಾಗಿದೆ. ಹೋರಾಟಗಾರರನ್ನು ಬಿಡುಗಡೆ ಮಾಡುವುದು, ಯುದ್ಧವನ್ನು ನಿಲ್ಲಿಸುವುದು, ಕಷ್ಟಪಟ್ಟು ಗಳಿಸಿದ ಸಾಧನಗಳನ್ನು ಹಾಳು ಮಾಡುವುದು, ಹಲವಾರು ಒತ್ತೆಯಾಳುಗಳನ್ನು ಕೈಬಿಡುವುದನ್ನು ಒಳಗೊಂಡ ಶರಣಾಗತಿ ಒಪ್ಪಂದದ ಭಾಗವಾಗಲು ನಮಗೆ ಇಷ್ಟವಿಲ್ಲ ಎಂದು ಸ್ಮೊಟ್ರಿಚ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಮ್ಮ ಎಲ್ಲಾ ಬಲಗಳನ್ನು ಪ್ರಯೋಗಿಸಿ ಗಾಝಾ ಪಟ್ಟಿಯನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸಲು ಮತ್ತು ಶುದ್ಧೀಕರಿಸಲು ಇದು ಸಕಾಲವಾಗಿದೆ. ಗಾಝಾ ಪಟ್ಟಿಗೆ ಪೂರೈಕೆಯಾಗುವ ಮಾನವೀಯ ನೆರವನ್ನು ಹಮಾಸ್ ದುರುಪಯೋಗ ಪಡಿಸುವುದನ್ನು ನಾವು ತಡೆಯಬೇಕಿದೆ. ಹಮಾಸ್ ಎಲ್ಲಾ ಒತ್ತೆಯಾಳುಗಳನ್ನೂ ಬಿಡುಗಡೆಗೊಳಿಸಿ ಶರಣಾಗುವವರೆಗೆ ಗಾಝಾದಲ್ಲಿ ನರಕದ ಬಾಗಿಲನ್ನು ತೆರೆಯಬೇಕಿದೆ' ಎಂದವರು ಆಗ್ರಹಿಸಿದ್ದಾರೆ.