ಗಾಝಾ ಕದನ ವಿರಾಮ ಕರಡು ಒಪ್ಪಂದಕ್ಕೆ ಹಮಾಸ್ ಅಂಗೀಕಾರ
ಗಾಝಾ : ಗಾಝಾ ಪಟ್ಟಿಯಲ್ಲಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಕುರಿತ ಕರಡು ಒಪ್ಪಂದವನ್ನು ಅಂಗೀಕರಿಸಿರುವುದಾಗಿ ಹಮಾಸ್ ನಾಯಕರು ಹೇಳಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಹಮಾಸ್‍ನೊಂದಿಗಿನ ದೀರ್ಘಾವಧಿಯ ಕದನ ವಿರಾಮ ಮಾತುಕತೆಗಳ ನಡುವೆ ದೇಶವು ಮುಂದಿನ ಕೆಲವು ಗಂಟೆಗಳಲ್ಲಿ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸುತ್ತಿದೆ ಎಂದು ಇಸ್ರೇಲ್‍ನ ಸಹಾಯಕ ವಿದೇಶಾಂಗ ಸಚಿವರು ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ, ಎರಡೂ ಪಕ್ಷಗಳ ನಡುವಿನ ಮಧ್ಯವರ್ತಿ ಖತರ್ `ಒಪ್ಪಂದಕ್ಕೆ ಅಂತಿಮ ಮುದ್ರೆಯೊತ್ತುವ ನಿಕಟ ಹಂತದಲ್ಲಿ ಮಾತುಕತೆ ಮುಂದುವರಿದಿದೆ' ಎಂದಿದೆ.
ಪ್ರಗತಿ ಸಾಧಿಸಲಾಗಿದೆ. ಕರಡು ಒಪ್ಪಂದದ ಯೋಜನೆಯನ್ನು ಅಂತಿಮ ಅಂಗೀಕಾರಕ್ಕೆ ಇಸ್ರೇಲ್ ಸಂಪುಟದ ಎದುರು ಮಂಡಿಸಲಾಗುವುದು ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ನಡೆಯುತ್ತಿರುವ ಮಾತುಕತೆಗಳು ಸಕಾರಾತ್ಮಕ ಮತ್ತು ಫಲಪ್ರದವಾಗಿದ್ದು ಇಂದು ನಾವು ಒಪ್ಪಂದ ಪೂರ್ಣಗೊಳ್ಳುವ ನಿಕಟ ಹಂತದಲ್ಲಿದ್ದೇವೆ ಎಂದು ಖತರ್ ವಿದೇಶಾಂಗ ಇಲಾಖೆಯ ವಕ್ತಾರ ಮಜೀದ್ ಅಲ್-ಅನ್ಸಾರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ನಡೆಯುತ್ತಿರುವ ಮಾತುಕತೆ ಅಂತಿಮ ಹಂತ ತಲುಪಿದೆ ಎಂದು ಹಮಾಸ್ ನಾಯಕರು ಹೇಳಿದ್ದಾರೆ.