ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಬಂಧನ
ಸಿಯೋಲ್ : ಸುಮಾರು ಎರಡು ವಾರಗಳ ತನಕ ಮುಂದುವರಿದ ಬಿಕ್ಕಟ್ಟಿನ ಬಳಿಕ ದಕ್ಷಿಣ ಕೊರಿಯಾದ ದೋಷಾರೋಪಣೆಗೊಂಡ ಅಧ್ಯಕ್ಷ ಯೂನ್ ಸುಕ್ ಯೆಯೋಲ್‍ರನ್ನು ಭ್ರಷ್ಟಾಚಾರ ನಿಗ್ರಹ ಏಜೆನ್ಸಿ ಬುಧವಾರ ಬಂಧಿಸಿರುವುದಾಗಿ ವರದಿಯಾಗಿದೆ.
ಇದರೊಂದಿಗೆ ಯೂನ್ ಸುಕ್ ದೇಶದ ಇತಿಹಾಸದಲ್ಲೇ ಬಂಧನಕ್ಕೊಳಗಾದ ಮೊದಲ ಹಾಲಿ ಅಧ್ಯಕ್ಷ ಎನಿಸಿಕೊಂಡಿದ್ದಾರೆ. ಸೈರನ್‍ಗಳನ್ನು ಹೊಂದಿರುವ ಕಪ್ಪು ಕಾರುಗಳ ಸಾಲು ಅಧ್ಯಕ್ಷರ ಭವನದ ಆವರಣದಿಂದ ಪೊಲೀಸರ ಬೆಂಗಾವಲಿನಲ್ಲಿ ಹೊರಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ.
ಕಳೆದ ತಿಂಗಳು ದೇಶದಲ್ಲಿ ಮಿಲಿಟರಿ ಕಾನೂನು ಜಾರಿಗೊಳಿಸಿದ ಬಳಿಕ ಯೂನ್ ಸುಕ್ ಯೆಯೋಲ್‍ರನ್ನು ಸಂಸತ್‍ನಲ್ಲಿ ದೋಷಾರೋಪಣೆಗೆ ಗುರಿಪಡಿಸಿ ಅಧಿಕಾರವನ್ನು ಕಿತ್ತುಕೊಳ್ಳಲಾಗಿತ್ತು. ಯೂನ್ ಸುಕ್ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಗಾಗಿ ಅವರನ್ನು ಬಂಧಿಸಲು ವಾರಂಟ್ ಜಾರಿಗೊಂಡ ಬಳಿಕ ಬಂಧನ ಪ್ರಯತ್ನ ವಿಫಲವಾಗಿತ್ತು. ಬಳಿಕ ಎರಡನೇ ಬಾರಿ ಬಂಧನ ವಾರಂಟ್ ಜಾರಿಗೊಳಿಸಲಾಗಿತ್ತು.
ಅಮಾನತುಗೊಂಡ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರ ಸರ್ಕಾರಿ ನಿವಾಸಕ್ಕೆ ಬುಧವಾರ `ಉನ್ನತ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖಾ ಏಜೆನ್ಸಿ'ಯ ಅಧಿಕಾರಿಗಳು ಆಗಮಿಸಿ ಬಂಧನಕ್ಕೆ ವಾರಂಟ್ ಹಸ್ತಾಂತರಿಸಿದರು ಎಂದು ವರದಿಯಾಗಿದೆ.
ಡಿಸೆಂಬರ್ 3ರ ಮಿಲಿಟರಿ ಕಾನೂನು ಘೋಷಣೆಗೆ ಸಂಬಂಧಿಸಿ ಬಂಡಾಯದ ಆರೋಪದಲ್ಲಿ ದೋಷಾರೋಪಣೆಗೆ ಗುರಿಯಾಗಿರುವ ಅಧ್ಯಕ್ಷ ಯೂನ್ ಸುಕ್ ಯೆಯೋಲ್‍ರನ್ನು ದಕ್ಷಿಣ ಕೊರಿಯಾ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತನಿಖಾಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಸಿಯೋಲ್‍ನಲ್ಲಿರುವ ಸರ್ಕಾರಿ ನಿವಾಸದಲ್ಲಿ ಮುಳ್ಳುತಂತಿಯ ಬೇಲಿ ಹಾಗೂ ವೈಯಕ್ತಿಕ ಭದ್ರತೆಯ ಸಣ್ಣ ಸೈನ್ಯದ ಭದ್ರತೆಯಲ್ಲಿ ಉಳಿದುಕೊಂಡಿದ್ದ ಯೂನ್ ಸುಕ್‍ರನ್ನು 3000ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಂಡ ಬಂಧಿಸುವಲ್ಲಿ ಕಡೆಗೂ ಯಶಸ್ವಿಯಾಗಿದೆ. ಕಡಿಮೆ ಸಂಖ್ಯೆಯಲ್ಲಿದ್ದ ಯೂನ್ ಸುಕ್ ಬೆಂಬಲಿಗರು ಅವರ ನಿವಾಸದ ಹೊರಗಡೆ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಯೂನ್ ಸುಕ್ ಅವರ ಬಂಧನ ಕಾನೂನು ಬಾಹಿರವಾಗಿದ್ದು ಅವರನ್ನು ಸಾರ್ವಜನಿಕವಾಗಿ ಅವಮಾನಿಸುವ ಉದ್ದೇಶ ಹೊಂದಿದೆ ಎಂದು ಅವರ ವಕೀಲರು ವಾದಿಸಿದರು. ಈ ಸಂದರ್ಭ ಯೂನ್ ಅವರ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಸಣ್ಣ ಪ್ರಮಾಣದಲ್ಲಿ ಮಾತಿನ ಚಕಮಕಿ, ತಳ್ಳಾಟ ನಡೆಯಿತು ಎಂದು ವರದಿ ಹೇಳಿದೆ. ` ತನಿಖೆಯ ಕಾನೂನು ಬದ್ಧತೆಯನ್ನು ತಾನು ಒಪ್ಪಿಕೊಳ್ಳುವುದಿಲ್ಲ. ಆದರೆ ರಕ್ತಪಾತವನ್ನು ತಡೆಯಲು ಸಂಕಲ್ಪಿಸಿದ್ದೇನೆ' ಎಂದು ಮೊದಲೇ ರೆಕಾರ್ಡ್ ಮಾಡಿದ ಸಂದೇಶದಲ್ಲಿ ಯೂನ್ ಸುಕ್ ಯೆಯೋಲ್ ಹೇಳಿದ್ದು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಪ್ರತಿಪಾದಿಸಿದ್ದಾರೆ.
►ಎರಡನೇ ಪ್ರಯತ್ನ ಯಶಸ್ವಿ
ದೋಷಾರೋಪಣೆಯ ಬಳಿಕ ಅಮಾನತುಗೊಂಡಿರುವ ಯೂನ್ ಸುಕ್ ಯೆಯೋಲ್‍ರನ್ನು ಅಧ್ಯಕ್ಷತೆಯಿಂದ ಶಾಶ್ವತವಾಗಿ ಪದಚ್ಯುತಗೊಳಿಸಬೇಕೇ ಎಂಬುದನ್ನು ನಿರ್ಧರಿಸಲು ಅವರನ್ನು ಬಂಧಿಸುವಂತೆ ಸಾಂವಿಧಾನಿಕ ನ್ಯಾಯಾಲಯ ಆದೇಶಿಸಿತ್ತು.
ಅದರಂತೆ ಬಂಧನ ವಾರಂಟ್ ಪಡೆದು ಜನವರಿ 3ರಂದು ಬಂಧಿಸಲು ನಡೆಸಿದ ಪ್ರಯತ್ನವನ್ನು ಅವರ ಬೆಂಬಲಿಗರು ಮತ್ತು ಅಧ್ಯಕ್ಷೀಯ ಭದ್ರತಾ ಪಡೆ ವಿಫಲಗೊಳಿಸಿತ್ತು. ಬಳಿಕ ಬಂಧನ ವಾರಾಂಟ್‍ನ ಅವಧಿಯನ್ನು ಸಿಯೋಲ್‍ನ ನ್ಯಾಯಾಲಯ ವಿಸ್ತರಿಸಿತ್ತು. ಬುಧವಾರ 3000ಕ್ಕೂ ಹೆಚ್ಚು ಪೊಲೀಸರು, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳನ್ನು ಒಳಗೊಂಡ ತಂಡ ನಡೆಸಿದ ಎರಡನೇ ಪ್ರಯತ್ನ ಯಶಸ್ವಿಯಾಗಿದೆ.