ಬಡರಾಷ್ಟ್ರಗಳಿಗೆ ಜೀವರಕ್ಷಕ ಔಷಧಿಗಳ ಪೂರೈಕೆ ಸ್ಥಗಿತ: ‘ಯುಎಸ್ ಏಯ್ಡ್’ ಟ್ರಂಪ್ ಆಡಳಿತ ಆದೇಶ
![ಬಡರಾಷ್ಟ್ರಗಳಿಗೆ ಜೀವರಕ್ಷಕ ಔಷಧಿಗಳ ಪೂರೈಕೆ ಸ್ಥಗಿತ: ‘ಯುಎಸ್ ಏಯ್ಡ್’ ಟ್ರಂಪ್ ಆಡಳಿತ ಆದೇಶ Photo of Donald Trump](https://www.varthabharati.in/h-upload/2025/01/28/1500x900_1318682-itttt.webp)
ಡೊನಾಲ್ಡ್ ಟ್ರಂಪ್ | PC : PTI
ವಾಶಿಂಗ್ಟನ್: ಅಮೆರಿಕ ಸರಕಾರದ ನೆರವು ಸಂಸ್ಥೆ ‘ಯುಎಸ್ ಏಯ್ಡ್’ ಮೂಲಕ ಬಡದೇಶಗಳಿಗೆ ಎಚ್‌ಐವಿ, ಮಲೇರಿಯ ಹಾಗೂ ಕ್ಷಯ ಇತ್ಯಾದಿ ರೋಗಗಳಿಗಾಗಿನ ಜೀವರಕ್ಷಕ ಔಷಧಿಗಳು ಮತ್ತು ನವಜಾತ ಶಿಶುಗಳಿಗೆ ವೈದ್ಯಕೀಯ ಸಾಮಾಗ್ರಿಗಳ ಪೂರೈಕೆಯನ್ನು ಸ್ಥಗಿತಗೊಳಿಸಲು ಟ್ರಂಪ್ ಆಡಳಿತ ಆದೇಶ ಹೊರಡಿಸಿದೆಯೆಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕ ಏಜೆನ್ಸಿ (ಯುಎಸ್‌ಏಯ್ಡ್) ಜೊತೆ ಕೆಲಸ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಪಾಲುದಾರರಿಗೆ ಈ ಬಗ್ಗೆ ಟ್ರಂಪ್ ಆಡಳಿತ ವಿಜ್ಞಾಪನ ಪತ್ರವನ್ನು ಕಳುಹಿಸಿದೆಯೆಂದು ಮೂಲಗಳು ತಿಳಿಸಿವೆ.
ಯುಎಸ್ ಏಯ್ಡ್ ಸಂಸ್ಥೆಯ ಜೊತೆ ಕಾರ್ಯಾಚರಿಸುತ್ತಿರುವ ಅಮೆರಿಕದ ಬೃಹತ್ ಸಮಾಲೋಚಕ ಸಂಸ್ಥೆ ಕೆಮೊನಿಕ್ಸ್‌ಗೂ ಈ ಬಗ್ಗೆ ವಿಜ್ಞಾಪನಾ ಪತ್ರ ಬಂದಿರುವುದಾಗಿ ಮೂಲಗಳು ತಿಳಿಸಿವೆ.
ಟ್ರಂಪ್ ಸರಕಾರದ ಈ ನಡೆಯನ್ನು ಯುಎಸ್‌ಏಯ್ಡ್‌ನ ಜಾಗತಿಕ ಆರೋಗ್ಯ ವಿಭಾಗದ ಮಾಜಿ ವರಿಷ್ಠ ಅತುಲ್ ಗಾವಂಡೆ ಖಂಡಿಸಿದ್ದು, ಇದೊಂದು ಘೋರ ದುರಂತವೆಂದು ಬಣ್ಣಿಸಿದ್ದಾರೆ. ಯುಎಸ್‌ಏಯ್ಡ್ ಪೂರೈಕೆ ಮಾಡುವ ದೇಣಿಗೆಯ ಔಷಧಿಗಳಿಂದಾಗಿ ಎಚ್‌ಐವಿ ಪೀಡಿತ 2 ಕೋಟಿಗೂ ಅಧಿಕ ಮಂದಿ ಜೀವಂತವಾಗಿ ಉಳಿದಿದ್ದಾರೆ.ಆದರೆ ಆ ನೆರವು ಇಂದು ಸ್ಥಗಿತಗೊಂಡಿದೆ ಎಂದು ಅವರು ಹೇಳಿದ್ದಾರೆ.