ಭಾರತದಲ್ಲಿ ಮತದಾನಕ್ಕಾಗಿ ಉದ್ದೇಶಿತ 21 ಮಿಲಿಯನ್ ಡಾಲರ್‌ ಅನುದಾನವನ್ನು ರದ್ದುಗೊಳಿಸಿದ ಟ್ರಂಪ್ ಆಡಳಿತ

Update: 2025-02-16 17:08 IST
Donald Trump, Elon Musk

ಡೊನಾಲ್ಡ್ ಟ್ರಂಪ್ ,  ಎಲಾನ್ ಮಸ್ಕ್ | PC : PTI 

  • whatsapp icon

ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಡಿ ಎಲಾನ್ ಮಸ್ಕ್ ನೇತೃತ್ವದ ಸರಕಾರಿ ಕಾರ್ಯದಕ್ಷತೆ ಇಲಾಖೆ (DOGE) ಯು ‘ಭಾರತದಲ್ಲಿ ಮತದಾನ’ಕ್ಕಾಗಿ ನೀಡಲು ಉದ್ದೇಶಿಸಿದ್ದ 21 ಮಿಲಿಯನ್ ಡಾಲರ್ ರದ್ದತಿ ಸೇರಿದಂತೆ ಸರಣಿ ವೆಚ್ಚ ಕಡಿತಗಳನ್ನು ರವಿವಾರ ಪ್ರಕಟಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯು,‘ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಬಾಹ್ಯ ಹಸ್ತಕ್ಷೇಪ ’ ಎಂದು ಆರೋಪಿಸಿದೆ.

ಅಧಿಕೃತ (DOGE) ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿರುವ ಎಕ್ಸ್ ಪೋಸ್ಟ್‌ನಲ್ಲಿ ‘ಅಮೆರಿಕದ ತೆರಿಗೆದಾರರ ಡಾಲರ್‌ಗಳು ಈ ಕೆಳಗಿನ ಬಾಬ್ತುಗಳಿಗೆ ಖರ್ಚಾಗುತ್ತಿತ್ತು, ಅವೆಲ್ಲವನ್ನೂ ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿದ್ದು,ಇಂತಹ ಬಾಬ್ತುಗಳ ಪಟ್ಟಿಯನ್ನೂ ಪ್ರಕಟಿಸಲಾಗಿದೆ.

ಬಾಂಗ್ಲಾದೇಶದಲ್ಲಿ ರಾಜಕೀಯ ಸ್ಥಿತಿಯನ್ನು ಬಲಗೊಳಿಸಲು ನಿಗದಿಯಾಗಿದ್ದ 29 ಮಿ‌ಲಿಯನ್ ಡಾಲರ್ ಮತ್ತು ಮೊಝಾಂಬಿಕ್‌ನಲ್ಲಿ ಸ್ವಯಂಪ್ರೇರಿತ ವೈದ್ಯಕೀಯ ಪುರುಷರ ಸುನ್ನತಿಗಾಗಿ 10 ಮಿ‌ಲಿಯನ್ ಡಾ‌ಲರ್ ಗಳು ಸೇರಿದಂತೆ ಹಲವಾರು ಇತರ ಅಮೆರಿಕನ್ ವೆಚ್ಚಗಳನ್ನು ಯುಎಸ್ ತೆರಿಗೆದಾರರ ಹಣವನ್ನು ಉಳಿಸುವ ಉದ್ದೇಶದಿಂದ ರದ್ದುಗೊಳಿಸಲಾಗಿದೆ.

ಅಮೆರಿಕದ ಪ್ರಕಟಣೆಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು,ಭಾರತದಲ್ಲಿ ಮತದಾನಕ್ಕಾಗಿ 21 ಮಿ‌ಲಿಯನ್ ಡಾಲರ್ ನಿಗದಿ? ಇದು ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಬಾಹ್ಯ ಹಸ್ತಕ್ಷೇಪಕ್ಕೆ ಸಮನಾಗಿದೆ ಎಂದು ಹೇಳಿದ್ದು,ಇದರಿಂದ ಯಾರಿಗೆ ಲಾಭವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಖಂಡಿತವಾಗಿಯೂ ಆಡಳಿತ ಪಕ್ಷಕ್ಕಲ್ಲ ಎಂದೂ ಅವರು ಸೇರಿಸಿದ್ದಾರೆ.

ನೇಪಾಳದಲ್ಲಿ ‘ವಿತ್ತೀಯ ಫೆಡರಲಿಸಂ’ ಮತ್ತು ‘ಜೀವವೈವಿಧ್ಯ ಸಂರಕ್ಷಣೆ’ಗಾಗಿ ನಿಗದಿಗೊಳಿಸಿದ್ದ 39 ಮಿ‌ಲಿಯನ್ ಡಾಲರ್ ಗಳನ್ನೂ DOGE ರದ್ದುಗೊಳಿಸಿದೆ. ವಿವಿಧ ಉದ್ದೇಶಗಳಿಗಾಗಿ ಲೈಬೀರಿಯಾಕ್ಕೆ 1.5 ಮಿಲಿಯನ್ ಡಾಲರ್,ಮಾಲಿಗೆ 14 ಮಿಲಿಯನ್ ಡಾಲರ್,‌ ದಕ್ಷಿಣ ಆಫ್ರಿಕಾಕ್ಕೆ 2.5 ಮಿಲಿಯನ್ ಡಾಲರ್, ಪ್ರಾಗ್ ಸಿವಿಲ್ ಸೊಸೈಟಿ ಸೆಂಟರ್‌ಗೆ 32 ಮಿಲಿಯನ್ ಡಾಲರ್ ಮತ್ತು ಏಶ್ಯಾಕ್ಕೆ 47 ಮಿಲಿಯನ್ ಡಾಲರ್ ಗಳ ನೆರವನ್ನೂ ಅದು ರದ್ದುಗೊಳಿಸಿದೆ.

ಈ ಕ್ರಮಗಳು ಸರಕಾರಿ ವೆಚ್ಚಗಳಲ್ಲಿ ಗಣನೀಯ ಮಾರ್ಪಾಡುಗಳನ್ನು ಜಾರಿಗೆ ತರುವ DOGE ನ ಇತ್ತೀಚಿನ ಉಪಕ್ರಮಕ್ಕೆ ಅನುಗುಣವಾಗಿವೆ. ಟ್ರಂಪ್ ಆಡಳಿತದಲ್ಲಿ ಸ್ಥಾಪಿಸಲಾಗಿರುವ DOGE ಗೆ ವ್ಯರ್ಥ ಸರಕಾರಿ ವೆಚ್ಚಗಳನ್ನು ನಿವಾರಿಸುವ ಹೊಣೆಗಾರಿಕೆಯನ್ನು ವಹಿಸಲಾಗಿದೆ. ಆದರೆ ತನ್ನ ವ್ಯಾಪಕ ಅಧಿಕಾರಗಳು ಮತ್ತು ಮಸ್ಕ್ ಪ್ರಭಾವದಿಂದಾಗಿ ಅದು ಟೀಕೆಗಳಿಗೆ ಗುರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News