19ರ ಕೆಳಗಿನವರಿಗೆ ಲಿಂಗ ಪರಿವರ್ತನೆ ಆರೈಕೆ ಮೇಲೆ ಮಿತಿ ಹೇರಿದ ಟ್ರಂಪ್
![19ರ ಕೆಳಗಿನವರಿಗೆ ಲಿಂಗ ಪರಿವರ್ತನೆ ಆರೈಕೆ ಮೇಲೆ ಮಿತಿ ಹೇರಿದ ಟ್ರಂಪ್ Photo of Donald Trump](https://www.varthabharati.in/h-upload/2025/01/29/1500x900_1318824-itttt.webp)
ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: 19 ವರ್ಷಕ್ಕಿಂತ ಕೆಳಗಿನವರಿಗೆ ಲಿಂಗ ಪರಿವರ್ತನೆ ಕಾರ್ಯವಿಧಾನಗಳಿಗೆ ಮಿತಿ ಹೇರುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ರಾತ್ರಿ ಸಹಿ ಹಾಕಿದ್ದಾರೆ. ಟ್ರಂಪ್ ತನ್ನ ಪದಗ್ರಹಣ ಭಾಷಣದಲ್ಲಿ ತನ್ನ ಆಡಳಿತವು ಪುರುಷ ಮತ್ತು ಸ್ತ್ರೀ; ಈ ಎರಡು ಲಿಂಗಗಳಿಗೆ ಮಾತ್ರ ಮಾನ್ಯತೆ ನೀಡಲಿದೆ ಎಂದು ಹೇಳಿದ್ದರು.
‘ಇಂದು ದೇಶಾದ್ಯಂತ ವೈದ್ಯಕೀಯ ವೃತ್ತಿಪರರು ಮಕ್ಕಳ ಲಿಂಗ ಪರಿವರ್ತನೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇದು ಅಪಾಯಕಾರಿ ಪ್ರವೃತ್ತಿಯಾಗಿದ್ದು, ನಮ್ಮ ದೇಶದ ಇತಿಹಾಸಕ್ಕೆ ಕಳಂಕವನ್ನುಂಟು ಮಾಡುತ್ತದೆ ಮತ್ತು ಇದು ಅಂತ್ಯಗೊಳ್ಳಲೇಬೇಕು’ ಎಂದು ಆದೇಶದಲ್ಲಿ ಹೇಳಲಾಗಿದೆ.
ಮಕ್ಕಳ ಲಿಂಗ ಬದಲಾವಣೆಗೆ ಅಮೆರಿಕ ಸರಕಾರವು ಹಣಕಾಸು ಒದಗಿಸುವುದಿಲ್ಲ, ಪ್ರಾಯೋಜಿಸುವುದಿಲ್ಲ,ಪ್ರಚಾರ ಮಾಡುವುದಿಲ್ಲ ಮತ್ತು ಬೆಂಬಲ ನೀಡುವುದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ. ಪ್ರೌಢಾವಸ್ಥೆಗೆ ತಡೆಗಳು,ಹಾರ್ಮೋನ್ ಚಿಕಿತ್ಸೆಗಳು ಮತ್ತು ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗಳನ್ನು ನಿರ್ಬಂಧಿಸಲಾಗಿದೆ.
ಈ ವಿನಾಶಕಾರಿ ಮತ್ತು ಜೀವನವನ್ನು ಬದಲಿಸುವ ಕಾರ್ಯವಿಧಾನಗಳನ್ನು ನಿಷೇಧಿಸಲು ಅಥವಾ ಸೀಮಿತಗೊಳಿಸಲು ಎಲ್ಲ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆದೇಶವು ಸರಕಾರಕ್ಕೆ ನಿರ್ದೇಶನವನ್ನೂ ನೀಡಿದೆ.
ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ವೈದ್ಯರ ವಿರುದ್ಧ ಮೊಕದ್ದಮೆಗಳನ್ನು ಹೂಡಲು ಮಕ್ಕಳು ಮತ್ತು ಪೋಷಕರಿಗೆ ಅವಕಾಶವನ್ನು ನೀಡುವ ಶಾಸನದ ಕುರಿತು ತಾನು ಕಾಂಗ್ರೆಸ್ ಜೊತೆ ಚರ್ಚಿಸುವುದಾಗಿಯೂ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಕಳೆದ ವಾರ ದಾವೋಸ್ ವೇದಿಕೆಯಲ್ಲಿ, ತನ್ನ ಆಡಳಿತದಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗಳು ಬಹು ಅಪರೂಪಕ್ಕೆ ನಡೆಯಲಿವೆ ಎಂದು ಹೇಳಿದ್ದರು.
ರಿಪಬ್ಲಿಕನ್ ಪಕ್ಷದ ಆಡಳಿತವಿರುವ ಸಮಾರು 24 ರಾಜ್ಯಗಳು ಈಗಾಗಲೇ ಅಪ್ರಾಪ್ತ ವಯಸ್ಕರಿಗೆ ಲಿಂಗ ಪರಿವರ್ತನೆಗಾಗಿ ವೈದ್ಯಕೀಯ ಆರೈಕೆಯನ್ನು ನಿರ್ಬಂಧಿಸುವ ಕಾನೂನುಗಳನ್ನು ಅಂಗೀಕರಿಸಿವೆ.