ಶ್ರೀಲಂಕಾ ನೌಕಾ ಪಡೆ ಗುಂಡಿಗೆ ಇಬ್ಬರು ಮೀನುಗಾರರಿಗೆ ಗಾಯ ; ಪ್ರತಿಭಟನೆ ದಾಖಲಿಸಿದ ಭಾರತ
![ಶ್ರೀಲಂಕಾ ನೌಕಾ ಪಡೆ ಗುಂಡಿಗೆ ಇಬ್ಬರು ಮೀನುಗಾರರಿಗೆ ಗಾಯ ; ಪ್ರತಿಭಟನೆ ದಾಖಲಿಸಿದ ಭಾರತ ಶ್ರೀಲಂಕಾ ನೌಕಾ ಪಡೆ ಗುಂಡಿಗೆ ಇಬ್ಬರು ಮೀನುಗಾರರಿಗೆ ಗಾಯ ; ಪ್ರತಿಭಟನೆ ದಾಖಲಿಸಿದ ಭಾರತ](https://www.varthabharati.in/h-upload/2025/01/28/1500x900_1318687-navi.webp)
PHOTO CREDIT | navy.lk
ಹೊಸದಿಲ್ಲಿ: ಶ್ರೀಲಂಕಾ ನೌಕಾ ಪಡೆ ಹಾರಿಸಿದ ಗುಂಡಿನಿಂದ ಬಂಧಿತ 13 ಭಾರತೀಯ ಮೀನುಗಾರರಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪುದುಚೇರಿ ಸರಕಾರದ ಅಧಿಕಾರಿ ತಿಳಿಸಿದ್ದಾರೆ.
ಶ್ರೀಲಂಕಾದ ನೌಕಾ ಪಡೆ ಮಂಗಳವಾರ 13 ಭಾರತೀಯ ಮೀನುಗಾರರನ್ನು ಬಂಧಿಸಿದ ಸಂದರ್ಭ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಶ್ರೀಲಂಕಾದ ನೌಕಾ ಪಡೆ ಗುಂಡು ಹಾರಿಸಿತು. ಇದರಿಂದ ಅವರಲ್ಲಿ ಇಬ್ಬರು ಮೀನುಗಾರರು ತೀವ್ರ ಗಾಯಗೊಂಡರು ಎಂದು ಅವರು ತಿಳಿಸಿದ್ದಾರೆ.
ಅಂತರ ರಾಷ್ಟ್ರೀಯ ಸಾಗರ ಗಡಿ ದಾಟಿದ ಹಾಗೂ ಶ್ರೀಲಂಕಾ ಜಲ ಭಾಗದಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಶ್ರೀಲಂಕಾ ನೌಕಾ ಪಡೆ ತಮಿಳುನಾಡು ಹಾಗೂ ಪುದುಚೇರಿಯ 13 ಮಂದಿ ಮೀನುಗಾರರನ್ನು ಬಂಧಿಸಿತು. ಅಲ್ಲದೆ, ಮೀನುಗಾರಿಕೆಗೆ ಬಳಸಿದ ಅವರ ಯಾಂತ್ರೀಕೃತ ದೋಣಿಗಳನ್ನು ವಶಕ್ಕೆ ತೆಗೆದುಕೊಂಡಿತು.
ಗಂಭೀರ ಗಾಯಗೊಂಡ ಇಬ್ಬರು ಮೀನುಗಾರರನ್ನು ಜಾಫ್ನಾದ ಟೀಚಿಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇತರ ಮೂವರು ಅಲ್ಪ ಸ್ವಲ್ಪ ಗಾಯಗಳಾಗಿವೆ. ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಶ್ರೀಲಂಕಾದ ನೌಕಾ ಪಡೆ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊಸದಿಲ್ಲಿಯಲ್ಲಿರುವ ಶ್ರೀಲಂಕಾ ಉಸ್ತುವಾರಿ ಹೈಕಮಿಷನರ್ ಅವರನ್ನು ಮಂಗಳವಾರ ಕರೆಸಿದೆ. ಘಟನೆ ಕುರಿತಂತೆ ತೀವ್ರ ಪ್ರತಿಭಟನೆ ದಾಖಲಿಸಿದೆ. ಕೊಲೊಂಬೊಂದಲ್ಲಿರುವ ಭಾರತೀಯ ಹೈಕಮಿಷನ್ ಕೂಡ ಶ್ರೀಲಂಕಾ ವಿದೇಶಾಂಗ ವ್ಯವಹಾರ ಸಚಿವಾಲಯದಲ್ಲಿ ಈ ವಿಷಯದ ಕುರಿತು ಪ್ರಶ್ನಿಸಿದೆ.