ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿದ 20 ವರ್ಷದ ಆರೋಪಿ ಥಾಮಸ್ ಮ್ಯಾಥ್ಯೂ ಯಾರು?
ಬೆಥೆಲ್ ಪಾರ್ಕ್ (ಅಮೆರಿಕ): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯಾ ಯತ್ನ ನಡೆಸಿದ ಬಂದೂಕುಧಾರಿಯನ್ನು ಬೆಥೆಲ್ ಪಾರ್ಕ್ ನಿವಾಸಿ ಥಾಮಸ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ತನಿಖಾಧಿಕಾರಿಗಳು ದಾಳಿಯ ಹಿಂದಿನ ಕಾರಣಗಳ ಕುರಿತು ಸುಳಿವುಗಳನ್ನು ಸಂಗ್ರಹಿಸುತ್ತಿರುವ ಬೆನ್ನಿಗೇ 20 ವರ್ಷದ ಥಾಮಸ್ ಮ್ಯಾಥ್ಯೂ ಹಿನ್ನೆಲೆ, ದಾಳಿ ಹಿಂದಿನ ಪ್ರಚೋದನೆಗಳು ಹಾಗೂ ಯಾವುದಾದರೂ ಪ್ರಭಾವಿ ಸಂಪರ್ಕಗಳ ಬಗ್ಗೆ ಅಸಂಖ್ಯಾತ ಪ್ರಶ್ನೆಗಳೆದ್ದಿವೆ.
ಡೊನಾಲ್ಡ್ ಟ್ರಂಪ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಆರೋಪಿ ಥಾಮಸ್ ಮ್ಯಾಥ್ಯೂ ಕಟ್ಟಡವೊಂದರ ಮೇಲ್ಚಾವಣಿಯ ಮೇಲೆ ಹತ್ತಿ ಕುಳಿತಿದ್ದ ಎಂದು ಹೇಳಲಾಗಿದೆ.
ಸಮಾವೇಶವೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ದಾಳಿ ನಡೆಸಿದ ಥಾಮಸ್ ಮ್ಯಾಥ್ಯೂ ಪೆನಿಸಿಲ್ವಿಯ ರಾಜ್ಯದ ಬೆಥೆಲ್ ಪಾರ್ಕ್ ನಿವಾಸಿ ಎಂದು ನ್ಯೂಯಾರ್ಕ್ ಪೋಸ್ಟ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಟ್ಲರ್ ಶೋ ಗ್ರೌಂಡ್ಸ್‌ನಲ್ಲಿ ನಿರ್ಮಿಸಲಾಗಿದ್ದ ವೇದಿಕೆಯ 130 ಗಜ ದೂರದಿಂದ ಆರೋಪಿ ಥಾಮಸ್ ಮ್ಯಾಥ್ಯೂ ಗುಂಡು ಹಾರಿಸಿದ್ದ ಎಂದು ಹೇಳಲಾಗಿದೆ. ಈ ವೇದಿಕೆಯಿಂದ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಯ ಭಾಷಣ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಈ ಘಟನೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಕಿವಿಗೆ ಗಾಯವಾಗಿದ್ದರೆ, ಸಮಾವೇಶದಲ್ಲಿ ಪಾಲ್ಗೊಂಡಿದಿದ್ದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ನಂತರ ಆರೋಪಿಯನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ.
ಘಟನೆ ಬೆನ್ನಿಗೇ ಡೊನಾಲ್ಡ್ ಟ್ರಂಪ್ ಅವರನ್ನು ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಈ ಕೃತ್ಯದಲ್ಲಿ ಆರೋಪಿಯೊಂದಿಗೆ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.