ಇಸ್ರೇಲ್ ಪಡೆಗಳ ದಾಳಿಯಲ್ಲಿ ಯಹ್ಯಾ ಸಿನ್ವರ್ ಮೃತ್ಯು: ದೃಢಪಡಿಸಿದ ಹಮಾಸ್
ಗಾಝಾ: ಗಾಝಾದಲ್ಲಿ ಇಸ್ರೇಲ್ ಪಡೆಗಳ ದಾಳಿಯಲ್ಲಿ ಹಮಾಸ್ ಉನ್ನತ ನಾಯಕ ಯಹ್ಯಾ ಸಿನ್ವರ್ ಹತರಾಗಿರುವುದನ್ನು ಹಮಾಸ್ ಶುಕ್ರವಾರ ದೃಢಪಡಿಸಿದೆ.
ಗುರುವಾರ ಗಾಝಾದ ಕಟ್ಟಡವೊಂದಕ್ಕೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಯಹ್ಯಾ ಸಿನ್ವರ್ ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್‍ನ ಗಾಝಾ ಮುಖ್ಯಸ್ಥ ಖಲೀಕ್ ಹಯ್ಯ ಖಚಿತಪಡಿಸಿದ್ದಾರೆ. ಸಿನ್ವರ್ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ʼಸಿನ್ವರ್ ಹತ್ಯೆಯಾಗಿದ್ದರೂ ಇದು ಗಾಝಾದಲ್ಲಿನ ಯುದ್ಧದ ಅಂತ್ಯವಲ್ಲ' ಎಂದಿದ್ದಾರೆ.
ಹಮಾಸ್ ಸ್ವಾತಂತ್ರ್ಯ ಮತ್ತು ಘನತೆಯನ್ನು ಹುಡುಕುವ ಜನರ ನೇತೃತ್ವದ ವಿಮೋಚನಾ ಚಳವಳಿಯಾಗಿದೆ. ನಾಯಕರ ಹತ್ಯೆಯಿಂದ ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪಿನ ನಿರ್ಮೂಲನೆ ಸಾಧ್ಯವಿಲ್ಲ ಎಂದು ಹಮಾಸ್‍ನ ರಾಜಕೀಯ ಬ್ಯೂರೊದ ಹಿರಿಯ ಸದಸ್ಯ ಬಾಸೆಮ್ ನಯಿಮ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಹಿಂದೆ ಹತರಾದ ಹಮಾಸ್‍ನ ಹಲವು ಮುಖಂಡರ ಪಟ್ಟಿ ಮಾಡಿದ ಅವರು `ಈ ನಾಯಕರ ಸಾವು ಗುಂಪಿನ ಜನಪ್ರಿಯತೆಯನ್ನು ಹೆಚ್ಚಿಸಿದೆ. ನಮ್ಮ ನಾಯಕರನ್ನು ಕೊಂದರೆ ನಮ್ಮ ಚಳವಳಿ ಮತ್ತು ಫೆಲೆಸ್ತೀನ್ ಜನರಿಗಾಗಿನ ಹೋರಾಟ ಅಂತ್ಯವಾಗಲಿದೆ ಎಂದು ಇಸ್ರೇಲ್ ನಂಬಿರುವಂತೆ ಕಾಣುತ್ತದೆ. ಹಮಾಸ್ ಪ್ರತೀ ಬಾರಿಯೂ ಹೆಚ್ಚು ಬಲಿಷ್ಟ ಮತ್ತು ಜನಪ್ರಿಯವಾಗಿದೆ. ಮತ್ತು ಈ ಮುಖಂಡರು ಸ್ವತಂತ್ರ ಫೆಲೆಸ್ತೀನ್ ಕಡೆಗಿನ ನಮ್ಮ ಪ್ರಯಾಣವನ್ನು ಮುಂದುವರಿಸಲು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ' ಎಂದವರು ಹೇಳಿದ್ದಾರೆ.
ಫೆಲೆಸ್ತೀನ್ ಯುದ್ಧ ಅಂತ್ಯಗೊಳ್ಳುವವರೆಗೂ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹಮಾಸ್ ಘೋಷಿಸಿದೆ.
ಇಸ್ರೇಲ್ ಜೈಲಿನಲ್ಲಿದ್ದ ಸಿನ್ವರ್:
ಇಬ್ಬರು ಇಸ್ರೇಲ್ ಯೋಧರು ಹಾಗೂ ಅವರೊಂದಿಗೆ ಶಾಮೀಲಾಗಿದ್ದರು ಎಂಬ ಶಂಕೆಯಲ್ಲಿ ನಾಲ್ವರು ಫೆಲೆಸ್ತೀನೀಯರನ್ನು ಹತ್ಯೆ ಮಾಡಿದ ಆರೋಪದಲ್ಲಿ 1988ರಲ್ಲಿ ಸಿನ್ವರ್ ರನ್ನು ಇಸ್ರೇಲ್ ಬಂಧಿಸಿ ಜೈಲಿನಲ್ಲಿ ಇಟ್ಟಿತ್ತು. ನಾಲ್ಕು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸಿನ್ವರ್ ರನ್ನು 2011ರಲ್ಲಿ ಇಸ್ರೇಲ್ ಯೋಧ ಗಿಲಾದ್ ಶಲಿಟ್ ಬಿಡುಗಡೆಗಾಗಿ ಮಾಡಿಕೊಂಡ ಒಪ್ಪಂದದಂತೆ ಬಿಡುಗಡೆಗೊಳಿಸಲಾಗಿತ್ತು (ಕೈದಿಗಳ ವಿನಿಮಯ). ಜೈಲಿನಲ್ಲಿದ್ದಾಗ ಹಲವು ಬಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಜೈಲಿನಲ್ಲಿದ್ದಾಗ ʼದಿ ಥಾರ್ನ್ ಆ್ಯಂಡ್ ದಿ ಕಾರ್ನೇಷನ್' ಎಂಬ ಕಾದಂಬರಿಯನ್ನೂ ಬರೆದಿದ್ದರು.
2017ರಲ್ಲಿ ಗಾಝಾದಲ್ಲಿ ಹಮಾಸ್‍ನ ರಾಜಕೀಯ ನಾಯಕರಾಗಿ ಆಯ್ಕೆಗೊಂಡ ಬಳಿಕ ಇರಾನ್ ಹಾಗೂ ಹಿಜ್ಬುಲ್ಲಾ ಜತೆ ಹಮಾಸ್ ಸಂಬಂಧಗಳನ್ನು ಗಟ್ಟಿಗೊಳಿಸಿದ್ದರು.
ಡಿಎನ್‍ಎ ಪರೀಕ್ಷೆಯಿಂದ ಸಿನ್ವರ್ ಮೃತದೇಹದ ಗುರುತು ಪತ್ತೆ
ಟೆಲ್‍ಅವೀವ್: ಯಹ್ಯಾ ಸಿನ್ವರ್ ಮೃತಪಟ್ಟಿರುವುದನ್ನು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ದೃಢಪಡಿಸಿದೆ. ವೈದ್ಯಕೀಯ ದಾಖಲೆಗಳು, ದಂತ ಮುದ್ರೆಗಳು ಮತ್ತು ಡಿಎನ್‍ಎ ಮಾದರಿಗಳ ಮೂಲಕ ಅವರ ಗುರುತಿಸುವಿಕೆ ಸಾಧ್ಯವಾಯಿತು.
1988ರಿಂದ 2011ರವರೆಗೆ ಯಹ್ಯಾ ಸಿನ್ವರ್ ಇಸ್ರೇಲ್‍ನ ಎಶೆಲ್ ಜೈಲಿನಲ್ಲಿದ್ದರು. ಈ ಸಂದರ್ಭ ಬ್ರೈನ್‍ಟ್ಯೂಮರ್ ನಿಂದ ಬಳಲಿದ ಸಿನ್ವರ್ ಗೆ ಇಸ್ರೇಲ್‍ನ ಸರ್ಜನ್ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ್ದರು. ವೈದ್ಯಕೀಯ ಚಿಕಿತ್ಸೆಯ ಸಂದರ್ಭ ಸಿದ್ಧಪಡಿಸಿದ್ದ ವೈದ್ಯಕೀಯ ದಾಖಲೆಗಳು ಈಗ ಇಸ್ರೇಲ್‍ಗೆ ನೆರವಾಗಿವೆ. ಮೌಖಿಕ ಮತ್ತು ಆರ್ಥೊಡಾಂಟಿಕ್ ತಜ್ಞರು ದವಡೆಯ ರಚನೆಯನ್ನು ದೃಢಪಡಿಸಿದ್ದಾರೆ. ಇದು ಡಿಎನ್‍ಎ ಪರೀಕ್ಷೆಗಳು ಅಂತಿಮ ದೃಢೀಕರಣವನ್ನು ನೀಡುವ ಮೊದಲು ಸಿನ್ವರ್ ಅವರ ಮೃತದೇಹವನ್ನು ಗುರುತಿಸಲು ಸಹಾಯ ಮಾಡಿತು ಎಂದು ಹಲವು ವರದಿಗಳು ಪ್ರತಿಪಾದಿಸಿವೆ.
ಗಾಝಾದ ತಾಲ್ ಎಲ್ ಸುಲ್ತಾನ್ ಪ್ರದೇಶದಲ್ಲಿ ಹಮಾಸ್‍ನ ಉನ್ನತ ನಾಯಕರಿಗಾಗಿ ಇಸ್ರೇಲ್‍ನ ಬಿಸ್ಲಾಚ್ ಬ್ರಿಗೇಡ್‍ನ ಪದಾತಿ ದಳ ಗುರುವಾರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಕಟ್ಟಡದ ನಡುವೆ ಮೂವರು ಶಂಕಿತ ಹಮಾಸ್ ಸದಸ್ಯರ ಚಲನವಲವನ್ನು ಗುರುತಿಸಲಾಗಿದೆ. ಆಗ ಗುಂಡಿನ ಚಕಮಕಿ ನಡೆದಿದೆ. ಈ ಹಂತದಲ್ಲಿ ಸಿನ್ವರ್ ನಾಶಗೊಂಡ ಕಟ್ಟಡವೊಂದರಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸಿದ್ದಾರೆ. ಆಗ ಇಸ್ರೇಲ್ ಪಡೆಗಳು ಕಟ್ಟಡವನ್ನು ಗುರಿಯಾಗಿಸಿ ಟ್ಯಾಂಕ್‍ನಿಂದ ಶೆಲ್ ಮತ್ತು ಕ್ಷಿಪಣಿ ದಾಳಿ ನಡೆಸಿವೆ. ದಾಳಿಯ ಬಳಿಕ ಇಸ್ರೇಲ್ ಭದ್ರತಾ ಪಡೆಗಳ ಮಿನಿ ಡ್ರೋನ್ ಕಟ್ಟಡದ ಒಳಗೆ ಕುರ್ಚಿಯೊಂದರಲ್ಲಿ ಕುಸಿದು ಧೂಳಿನಿಂದ ಮುಚ್ಚಲ್ಪಟ್ಟ ವ್ಯಕ್ತಿಯ ಫೋಟೋವನ್ನು ಸೆರೆ ಹಿಡಿದಿವೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಗಾಯಗೊಂಡಿದ್ದ ವ್ಯಕ್ತಿ ಡ್ರೋನ್‍ನತ್ತ ದೊಣ್ಣೆಯನ್ನು ಎಸೆವುದು ಕಂಡು ಬಂದಿದೆ. ಆಗ ನಮ್ಮ ಪಡೆಗಳು ಅವರನ್ನು ಹತ್ಯೆ ಮಾಡಿವೆ. ಡಿಎನ್‍ಎ ಪರೀಕ್ಷೆಯ ಬಳಿಕ ಸಿನ್ವರ್ ಎಂದು ದೃಢಪಟ್ಟಿರುವುದಾಗಿ ಇಸ್ರೇಲ್ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗಾರಿ ಹೇಳಿದ್ದಾರೆ.