ಧರ್ಮ ನಿರಪೇಕ್ಷ ಶಿಕ್ಷಣ ಉಳಿಸಲು ಎಐಡಿಎಸ್‌ಒ ಸ್ಥಾಪನೆ: ಗೋವಿಂದ ಯಳವಾರ

Update: 2024-12-28 15:01 GMT

ಕಲಬುರಗಿ: ದೇಶದ ಜನರ ಅಕ್ಷರ ಭವಿಷ್ಯ ಬರೆಯುವ ಶಿಕ್ಷಣ, ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಪ್ರಜಾಸತ್ತಾತ್ಮಕವಾಗಿರಬೇಕು ಎಂಬ ಮಹಾನ್ ಧ್ಯೇಯ ಗುರಿಯೊಂದಿಗೆ ಭಾರತದಲ್ಲಿ ಎಐಡಿಎಸ್‌ಒ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ ಸ್ಥಾಪನೆಯಾಗಿದೆ ಎಂದು ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷ ಗೋವಿಂದ ಯಳವಾರ ಹೇಳಿದರು.

ವಾಡಿ ಪಟ್ಟಣದ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ 70ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ನೇತಾಜಿ ಸುಭಾಷಚಂದ್ರ ಬೋಸ್, ಭಗತ್‌ಸಿಂಗ್ ಹಾಗೂ ಶಿವದಾಸ್ ಘೋಷ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಶಿಕ್ಷಣದ ಮೂಲಕ ಸರ್ಕಾರಗಳು ಜಾತಿ, ಧರ್ಮ ಮತ್ತು ಅವೈಜ್ಞಾನಿಕ ವಿಷಯಗಳನ್ನು ಹರಿಬಿಟ್ಟು ವಿದ್ಯಾರ್ಥಿಗಳ ಜಾತ್ಯಾತೀತ ಮನೋಭಾವದ ಮೇಲೆ ದಾಳಿ ನಡೆಸುತ್ತಿವೆ. ಅಶ್ಲೀಲತೆ ವ್ಯಾಪಕವಾಗಿ ಮುಕ್ತವಾಗಿ ಪ್ರಸಾರ ಮಾಡುವ ಮೂಲಕ ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುವಂತೆ ಮಾಡಲಾಗುತ್ತಿದೆ. ಶಿಕ್ಷಣದ ಖಾಸಗೀಕರಣದಿಂದಾಗಿ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಮೌಲ್ಯ ಕೋಟಿ ಕೋಟಿ ಮೀರಿನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಗತ್‌ಸಿಂಗ್, ನೇತಾಜಿಯವರ ಉತ್ತರಾಧಿಕಾರಿಗಳಾದ ವಿದ್ಯಾರ್ಥಿಗಳು ಸಂಘಟಿತ ಹೋರಾಟದ ಮೂಲಕ ಸಂಘರ್ಷದ ದಾರಿ ತುಳಿಯಬೇಕು ಎಂದು ಕರೆ ನೀಡಿದರು.

ಎಐಡಿಎಸ್‌ಒ ಜಿಲ್ಲಾ ಸಮಿತಿ ಸದಸ್ಯ ಸಿದ್ಧಾರ್ಥ ತಿಪ್ಪನೋರ ಮಾತನಾಡಿ, ಭಾರತದ ಸ್ವಾತಂತ್ರ್ಯ ಚಳವಳಿ ದಾರಿತಪ್ಪಿದ ಪ್ರಸಂಗವನ್ನು ನೆನೆದು ಮರುಗಿದ ಪಶ್ಚಿಮ ಬಂಗಾಳ ಮೂಲದ ಸಮಾಜವಾದಿ ಚಿಂತಕ ಶಿವದಾಸ್ ಘೋಷ್ ಅವರು ಭಾರತದಲ್ಲಿ ಬಂಡವಾಳಿಶಾಹಿಗಳ ಆಡಳಿತ ವ್ಯವಸ್ಥೆ ಸ್ಥಾಪನೆಯಾಗಿದ್ದನ್ನು ಖಂಡಿಸಿದರು. ದೇಶದಲ್ಲಿ ಮತ್ತೊಂದು ರೂಪದ ಶೋಷಣೆ ಎದುರಿಸಲು ಭಾರತೀಯರು ಸಜ್ಜಾಗಬೇಕಾಯಿತಲ್ಲ ಎಂದು ಗುಡುಗಿದರು.

ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೇರಿಸಲು 1948ರಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸುವ ಜತೆಗೆ 1954 ರಲ್ಲಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯನ್ನು ಹುಟ್ಟುಹಾಕಿದರು. ಇಂದು ದೇಶದ ಪ್ರತಿ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಪ್ರಬಲ ವಿದ್ಯಾರ್ಥಿ ಚಳುವಳಿಗಳು ಭುಗಿಲೇಳಲು ಎಐಡಿಎಸ್‌ಒ ಕಾರಣ ಎಂದು ಹೇಳಿದರು.

ಸಂಪತ್ ಗೌಂಡಿ, ದಶರಥ, ಶಾಂಭವಿ, ಅನಿತಾ, ಓಂಕಾರ, ಬಸವರಾಜ, ರಿತ್ವಿಕ್, ಯುವರಾಜ್, ಪ್ರೀತಮ್, ಅನಿಕೇತ್ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News