ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ವಿರುದ್ಧ ಎಫ್ಐಆರ್ ದಾಖಲು

Update: 2024-12-28 11:54 GMT

ರಾಜು ಕಪನೂರ್

ಕಲಬುರಗಿ: ಬೀದರ್ ನ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಶುಕ್ರವಾರ ರಾತ್ರಿ ನೀಡಿರುವ ದೂರಿನ ಆಧಾರದ ಮೇಲೆ ಇಂದು ಸಚಿವ ಪ್ರಿಯಾಂಕ ಖರ್ಗೆ ಅವರ ಆಪ್ತ ರಾಜು ಕಪನೂರ್ ಮತ್ತು ಇನ್ನಿತರ ವಿರುದ್ಧ ಇಲ್ಲಿನ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂದೋಲಾಶ್ರೀ ಸಿದ್ದಲಿಂಗ ಸ್ವಾಮೀಜಿ ಮತ್ತು ಮೂವರು ಬಿಜೆಪಿ ನಾಯಕರನ್ನು ಹತ್ಯೆ ಮಾಡುವುದಾಗಿ ಸಂಚು ರೂಪಿಸಿದ್ದಾರೆಂದು ಆರೋಪಿಸಿ, ಬಿಜೆಪಿಯ ಮುಖಂಡರು ಶುಕ್ರವಾರ ರಾತ್ರಿ ಕಮಿಷನರ್ ಅವರಿಗೆ ದೂರು ಕೊಟ್ಟಿದ್ದರು. ಇದಕ್ಕೂ ಮುಂಚೆ ಶುಕ್ರವಾರ ರಾತ್ರಿ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಬಂದಿದ್ದ ಬಿಜೆಪಿ ನಾಯಕರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದು ದೊಡ್ಡ ಹೈಡ್ರಾಮಾ ಸೃಷ್ಟಿಯಾಗಿತ್ತು.

ಬೆಳಗ್ಗೆಯಾದರೂ ಕೊಲೆಗೆ ಸಂಚು ಹೂಡಿದ್ದ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸದೆ ಇರುವುದರಿಂದ ಬಿಜೆಪಿ ಮುಖಂಡರು ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಕೋರ್ಟ್ ಗಮನಕ್ಕೆ ತಂದ ಪೊಲೀಸರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರಾಜು ಕಪನೂರ್ ಸೇರಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಅವರ ದೂರಿನನ್ವಯ, ಮಾಜಿ ಕಾರ್ಪೊರೇಟರ್ ರಾಜು ಕಪನೂರ್, ನಂದಕುಮಾರ್ ನಾಗಭುಜಂಗೆ, ಪ್ರತಾಪ್ ಧೀರ ಪಾಟೀಲ್, ಮನೋಜ್ ಶೇಜೇವಾಲ, ಗೋರಖನಾಥ್ ಸಜ್ಜನ್, ರಾಮನಗೌಡ ಪಾಟೀಲ್ ಅವರ ವಿರುದ್ಧ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News