ಡಿ.22ರಂದು ಜಯದೇವ ಹೃದ್ರೋಗ ಆಸ್ಪತ್ರೆ ಕಲಬುರಗಿ ಶಾಖೆ ಲೋಕಾರ್ಪಣೆ
-ದಸ್ತಗೀರ ನದಾಫ್ ಯಳಸಂಗಿ
ಕಲಬುರಗಿ: ಹೃದ್ರೋಗ ಆಸ್ಪತ್ರೆಗಾಗಿ ಕಲ್ಯಾಣ ಕರ್ನಾಟಕದ ಭಾಗದ ಜನರ ಬಹುದಿನಗಳ ಆಶಯವೂ ಇದೀಗ ಪೂರ್ಣಗೊಳ್ಳುತ್ತಿದೆ. ರಾಜ್ಯ ಸರಕಾರದ ಸ್ವಾಯತ್ತ ಸಂಸ್ಥೆಯಾದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖೆಯು ಡಿ22ರಂದು ಲೋಕಾರ್ಪಣೆಯಾಗುತ್ತಿದೆ.
ಹೃದಯ ಸಂಬಂಧಿತ ಸಮಸ್ಯೆಗಳನ್ನು ವೈದ್ಯರಿಗೆ ಸಂಪರ್ಕಿಸಬೇಕಾದರೆ ಕಲಬುರಗಿ ಮತ್ತು ಸುತ್ತಲಿನ ಜಿಲ್ಲೆಗಳ ರೋಗಿಗಳು ಪಕ್ಕದ ಮಹಾರಾಷ್ಟ್ರ, ತೆಲಂಗಾಣದ ನಗರಗಳಿಗೆ ಹಾಗೂ ದೂರದ ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ ಇದೀಗ ಜಯದೇವ ಆಸ್ಪತ್ರೆಯ ಶಾಖೆ ಕಲಬುರಗಿ ನಗರದ ಸರ್ದಾರ್ ವಲ್ಲಭಾಯ್ ಪಟೇಲ್ ರಸ್ತೆಯ ಎಸ್.ಎಂ.ಪಂಡಿತ್ ರಂಗಮಂದಿರದ ಎದುರು ವಿಶಾಲವಾದ ಕಟ್ಟಡದಲ್ಲಿ ಪ್ರಾರಂಭವಾಗುತ್ತಿರುವುದರಿಂದ ಆಪತ್ಕಾಲದಲ್ಲಿರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕಲಿದೆ ಎನ್ನುವುದು ಖುಷಿಯ ಸಂಗತಿಯಾಗಿದೆ.
ಜಯದೇವ ಆಸ್ಪತ್ರೆ ಕಲಬುರಗಿ ಶಾಖೆಯ ಇತಿಹಾಸ:
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ(2013–2018) ಜಯದೇವ ಸಂಸ್ಥೆಯ ಸ್ಥಾಪನೆಗೆ ಮುನ್ನುಡಿ ಬರೆಯಲಾಗಿತ್ತು. ಬೃಹತ್ ಆಸ್ಪತ್ರೆ ನಿರ್ಮಾಣ ಮಾಡಲು ಬಳಿಕದ ಸರಕಾರ ನಿರ್ಲಕ್ಷ್ಯ ತೋರಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಶರಣ್ ಪ್ರಕಾಶ್ ಪಾಟೀಲ್ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಕೂಡಲೇ ಈ ಯೋಜನೆ ಕೈಗೆತ್ತಿಕೊಂಡರು. ನಿರಂತರ ಪರಿಶೀಲನೆ ಹಾಗೂ ಯೋಜನೆಯನ್ನು ಅನುಷ್ಠಾನ ಮಾಡಲೇಬೇಕೆಂಬ ಸಂಕಲ್ಪ ತೊಟ್ಟಿದ್ದರಿಂದ ಇಂದು ಜಯದೇವ ಹೃದ್ರೋಗ ಸಂಸ್ಥೆಯ 371 ಹಾಸಿಗೆಯ ಆಸ್ಪತ್ರೆಯ ಭವ್ಯ ಕಟ್ಟಡ ತಲೆ ಎತ್ತಿ ನಿಂತಿದೆ. ಇದಕ್ಕೂ ಮೊದಲು 2016ರಲ್ಲೇ ಆಸ್ಪತ್ರೆ ಪ್ರಾರಂಭಿಸಿ, ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡದ (ಜಿಮ್ಸ್) 4ನೆಯ ಮಹಡಿಯಲ್ಲಿ ಕೆಲಸ ಆರಂಭಿಸಿತ್ತು. ಅಲ್ಲಿ ಈವರೆಗೆ ಸುಮಾರು 5 ಲಕ್ಷ 75 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎನ್ನುತ್ತಾರೆ ಸಚಿವ ಶರಣ್ ಪ್ರಕಾಶ್ ಪಾಟೀಲ್.
371 ಹಾಸಿಗೆಯ ಆಸ್ಪತ್ರೆ ನಾಮಕರಣ ಯಾಕೆ?:
ಹೊಸ ಕಟ್ಟಡದಲ್ಲಿ ಕಣ್ಮನ ಸೆಳೆಯುತ್ತಿರುವ ಜಯದೇವ ಆಸ್ಪತ್ರೆಯು 371 ಹಾಸಿಗೆಯುಳ್ಳದ್ದಾಗಿದೆ. ಹೈದರಾಬಾದ್ ಕಲ್ಯಾಣ ಪ್ರದೇಶಕ್ಕೆ 371(ಜೆ) ಕಾಯ್ದೆಯಡಿ ವಿಶೇಷ ಸ್ಥಾನಮಾನ ನೀಡಿ, 10 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆ ಅದರ ಸವಿನೆನಪಿಗಾಗಿ ಈ ಕಟ್ಟಡ ಲೋಕಾರ್ಪಣೆಯಾಗುತ್ತಿದೆ. ಹಾಗಾಗಿ ಇದಕ್ಕೆ 371 ಹಾಸಿಗೆಯ ಜಯದೇವ ಆಸ್ಪತ್ರೆ ಎಂದು ಹೆಸರಿಸಲಾಗಿದೆ.
ಆಸ್ಪತ್ರೆ ಸಂಕೀರ್ಣದ ಒಟ್ಟು ಯೋಜನಾ ವೆಚ್ಚ 262.20 ಕೋಟಿ ರೂ. ಆಗಿದ್ದು, ಇದರಿಂದ ಕಲ್ಯಾಣ ಕರ್ನಾಟ ಭಾಗದ ಕಲಬುರಗಿ, ಕೊಪ್ಪಳ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು ಜಿಲ್ಲೆಯ ನಾಗರಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಅತ್ಯಾಧುನಿಕ ಹಾಗೂ ಗುಣಮಟ್ಟದ ಸೌಲಭ್ಯಗಳನ್ನು ಒಳಗೊಂಡಿರುವ 371 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಜಯದೇವ ಹೃದ್ರೋಗ ಸಂಸ್ಥೆಯ ದಕ್ಷಿಣ ಏಷ್ಯಾದ ಅತ್ಯಂತ ಬೃಹತ್ ಹೃದ್ರೋಗ ಚಿಕಿತ್ಸಾಸಂಸ್ಥೆ ಎಂಬ ಕೀರ್ತಿಗೂ ಪಾತ್ರವಾಗಿದೆ. ಜಯದೇವ ಸಂಸ್ಥೆ ಎಂದರೆ 'ಚಿಕಿತ್ಸೆ ಮೊದಲು, ಹಣ ನಂತರ (ಟ್ರೀಟ್ಮೆಂಟ್ ಫಸ್ಟ್-ಪೇಮೆಂಟ್ ನೆಕ್ಸ್ಟ್)' ಎಂಬ ಮುಖ್ಯ ಧ್ಯೇಯ ಹೊಂದಿದೆ.
ಜಯದೇವ ಕಲಬುರಗಿ ನೂತನ ಶಾಖೆಯ ವಿಶೇಷತೆಗಳು
❖ 262.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 371 ಹಾಸಿಗೆ ಸಾಮರ್ಥ್ಯದ ಕಟ್ಟಡ
❖ 3 ಕ್ಯಾಥ್ ಲ್ಯಾಬ್ ಗಳು
❖ 3 ಆಪರೇಷನ್ ಥಿಯೇಟರ್ಗಳು
❖ 1 ಹೈಬ್ರಿಡ್ ಆಪರೇಷನ್ ಥಿಯೇಟರ್
❖ 105 ಐಸಿಯು ಹಾಸಿಗೆಗಳು
❖ 120 ಸಾಮಾನ್ಯ ವಾರ್ಡ್ ಬೆಡ್
❖ ಅರೆ-ವಿಶೇಷ, ವಿಶೇಷ ಮತ್ತು ಡೀಲಕ್ಸ್ ವಾರ್ಡ್ ಹಾಸಿಗೆಗಳು, 12 ರಿಕವರಿ ಮತ್ತು 12 ಪೋಸ್ಟ್ ಆಪರೇಟಿವ್ ಹಾಸಿಗೆಗಳು
❖ ಕಾರ್ಡಿಯಾಲಜಿ, ಕಾರ್ಡಿಯೋಥೊರಾಸಿಕ್ ಸರ್ಜರಿ, ವ್ಯಾಸ್ಕುಲಾರ್ ಶಸ್ತ್ರಚಿಕಿತ್ಸೆ, ಪೀಡಿಯಾಟ್ರಿಕ್ ಕಾರ್ಡಿಯಾಲಜಿ, ರೇಡಿಯಾಲಜಿ, 128 ಸ್ಲೈಸ್ ಸಿಟಿ ಸ್ಕ್ಯಾನ್, 1.5ಟಿ ಎಂಆರ್ ಐ, ಅಲ್ಟ್ರಾಸೋನೋಗ್ರಫಿ, ಹೈಟೆಕ್ಪ್ಯಾಥಾಲಜಿ ಮತ್ತು ರಕ್ತ ಬ್ಯಾಂಕ್ ಸೇವೆ.
'ಸುಸಜ್ಜಿತ ಜಯದೇವ ಆಸ್ಪತ್ರೆಯು ಬಡವರ ಪಾಲಿಗೆ ವರದಾನವಾಗಲಿದೆ. ಸಾಮಾನ್ಯ ವರ್ಗದವರಿಗೆ, ಬಿಪಿಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ನೀಡಲಿದ್ದು, ಎಪಿಎಲ್ ಕಾರ್ಡ್ ದಾರರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಜನರು ಲಾಭ ಪಡೆದುಕೊಳ್ಳಲಿ'.
- ಡಾ. ಶರಣ್ ಪ್ರಕಾಶ್ ಪಾಟೀಲ್ ( ವೈದ್ಯಕೀಯ ಶಿಕ್ಷಣ ಸಚಿವ)
---------------------------
'2016ರಲ್ಲಿ ಸ್ಥಾಪಿತವಾದ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ 15 ಲಕ್ಷ ಜನರು ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ, 371 (ಜೆ) ಜಾರಿಯಾಗಿ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಕ್ಕಿದೆ, ಕಲಬುರಗಿ ಮೆಡಿಕಲ್ ಹಬ್ ಆಗಲಿದೆ'
-ಪ್ರಿಯಾಂಕ್ ಖರ್ಗೆ ( ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವರು)