ಕಲಬುರಗಿ | ಮುಖ್ಯಮಂತ್ರಿಗಳಿಂದ ಜಯದೇವ ಹೃದ್ರೋಗ ಆಸ್ಪತ್ರೆ ಉದ್ಘಾಟನೆ : ಡಾ.ಶರಣಪ್ರಕಾಶ್ ಪಾಟೀಲ್

Update: 2024-12-20 15:58 GMT

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಕೇಂದ್ರವಾದ ಕಲಬುರಗಿಯಲ್ಲಿ ಕೆ.ಕೆ.ಆರ್.ಡಿ.ಬಿ.ಯ 302 ಕೋಟಿ ರೂ. ಸೇರಿ ಒಟ್ಟಾರೆ 327.17 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 371 ಹಾಸಿಗೆ ಸಾಮರ್ಥ್ಯದ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆ ಕಲಬುರಗಿ ಶಾಖಾ ಆಸ್ಪತ್ರೆ ಇದೇ ಡಿ.22 ರಂದು ಲೋಕಾರ್ಪಣೆ ಮಾಡಲಾಗುತ್ತಿದ್ದು, ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಇಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.

ಶುಕ್ರವಾರ ನೂತನ ಜಯದೇವ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರದೇಶದ ಸಚಿವರು-ಶಾಸಕರು ಅಗಮಿಸಲಿದ್ದು, ಅಂದಾಜು 2,500 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದರು.

ನೂತನ ಆಸ್ಪತ್ರೆಯ ಸಾಮರ್ಥ್ಯಕ್ಕೆ ತಕ್ಕಂತೆ ಈಗಿರುವ 10 ಹೃದ್ರೋಗ ವೈದ್ಯರ ಜೊತೆಗೆ ಹೆಚ್ಚುವರಿಯಾಗಿ 21 ವೈದ್ಯರು, 120 ಸ್ಟಾಫ್ ನರ್ಸ್ ಸೇರಿದಂತೆ ಇತರೆ ಸಿಬ್ಬಂದಿಗಳ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಅದರಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.

ನೂತನ ಜಯದೇವ ಆಸ್ಪತ್ರೆಯಲ್ಲಿ 3 ಕ್ಯಾತಲ್ಯಾಬ್, ಮೂರು ಅಪರೇಷನ್ ಥಿಯೇಟರ್, ಒಂದು ಹೈಬ್ರಿಡ್ ಓ.ಟಿ. ಇರಲಿದೆ. ಎಕ್ಸ್ರೇ, ಇ.ಎಂ.ಆರ್.ಐ., ಬ್ಲಡ್ ಬ್ಯಾಂಕ್ ಸೇವೆ ಲಭ್ಯವಿರಲಿದೆ. 105 ಐ.ಸಿ.ಸಿ.ಯು ಬೆಡ್, 120 ಜನರಲ್ ಬೆಡ್ ಸೇರಿದಂತೆ ಒಟ್ಟಾರೆ 371 ಹಾಸಿಗೆ ಸಾಮರ್ಥ್ಯ ಇದ್ದು, ಅತ್ಯಾಧುನಿಕ ಸೌಲಭ್ಯದೊಂದಿಗೆ ಬಿ.ಪಿ.ಎಲ್ ರೋಗಿಗಳಿಗೆ ಉಚಿತ ಮತ್ತು ಎ.ಪಿ.ಎಲ್. ರೋಗಿಗಳಿಗೆ ಶೇ.30ರ ರಿಯಾಯಿತಿ ದರದೊಂದಿಗೆ ಚಿಕಿತ್ಸೆ ಸಿಗಲಿದೆ ಎಂದರು.

3 ತಿಂಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲಭ್ಯ :

ಜಯದೇವ ಆಸ್ಪತ್ರೆ ಉದ್ಘಾಟನೆ ನಂತರ ಮುಂದಿನ ಮೂರು ತಿಂಗಳಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಗಾಟಿಸಿ ಸಾರ್ವಜನಿಕರ ಸೇವೆಗೆ ಲಭ್ಯಗೊಳಿಸುವುದು ತಮ್ಮ ಮುಂದಿನ ಗುರಿ ಎಂದ ಅವರು, ಹಳೇ ಜಿಲ್ಲಾ ಆಸ್ಪತ್ರೆ ಕಡೆವಿ ಅಲ್ಲಿ 100 ಹಾಸಿಗೆಯ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಸಲಾಗುವುದು. ಜಿಮ್ಸ್ ಆವರಣದಲ್ಲಿಯೇ 50 ಹಾಸಿಗೆಯ ಕ್ರಿಟಿಕಲ್ ಕೇರ್ ಯೂನಿಟ್, ಸುಟ್ಟು ಗಾಯಗಳ ಘಟಕ ಸ್ಥಾಪಿಸಲಾಗುತ್ತಿದೆ. ಇದಲ್ಲದೆ ಗುಲ್ಬರ್ಗಾ ವಿ.ವಿ.ಯಲ್ಲಿ 10 ಎಕರೆ ಜಮೀನಿನಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಡಾ.ಶರಣಪ್ರಕಾಶ್ ಪಾಟೀಲ್ ವಿವರಿಸಿದರು.

ಜಯದೇವ ಆಸ್ಪತ್ರೆಯಿಂದ 5.75 ಲಕ್ಷ ಓ.ಪಿ.ಡಿ. ಸೇವೆ :

ಹಿಂದೆ 2016ರಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿಯೇ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆ ತಾತ್ಕಲಿಕ ಆರಂಭಿಸಲಾಗಿತ್ತು. ಕಳೆದ 8 ವರ್ಷಗಳ ಅವಧಿಯಲ್ಲಿ ಈ ಆಸ್ಪತ್ರೆಯಿಂದ 5.75 ಲಕ್ಷ ಜನ ಮತ್ತು 18,550 ಮಕ್ಕಳು ಓ.ಪಿ.ಡಿ. ಸೇವೆ ಪಡೆದಿದ್ದಾರೆ. 47,500 ಜನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದು, 39,462 ಜನ ಕ್ಯಾತ್ಲ್ಯಾಬ್ ಸೇವೆಗೆ ಒಳಗಾಗಿದ್ದಾರೆ. 25,000 ಜನ ಎನ್ಜಿಯೋಗ್ರಾಮ್ ಮಾಡಿಸಿದ್ದು, 13,000 ಎನ್ಜಿಯೋಪ್ಲಾಸ್ಟಿಸ್, 300 ಜನ ಪೇಸ್ ಮೇಕರ್ ಹಾಕಿಕೊಂಡಿದ್ದು, 1,300 ಜನ ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದಾರೆ. 3.92 ಲಕ್ಷ ಜನ ಇ.ಸಿ.ಜಿ, 2.14 ಲಕ್ಷ ಜನ ಎಕೊಓ ಟೆಸ್ಟ್ ಮಾಡಿಸಿದ್ದು, 53,399 ಜನ ಎಕ್ಸ್ರೇ ಮಾಡಿಸಿಕೊಂಡಿದ್ದಾರೆ ಎಂದ ಅವರು, ಆಸ್ಪತ್ರೆ ಸ್ಥಾಪನೆಯಿಂದ ಇಲ್ಲಿನ ಜನರು ದೂರದ ಬೆಂಗಳೂರು, ಸೋಲಾಪೂರ ಹೋಗುವುದು ತಪ್ಪಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಎಂ.ವೈ.ಪಾಟೀಲ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಡಿ.ಸಿ. ಬಿ.ಫೌಝಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿ.ಸಿ.ಎಫ್ ಸುಮಿತ್ ಪಾಟೀಲ, ಸಹಾಯಕ ಆಯುಕ್ತೆ ಸಾಹಿತ್ಯ, ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತ ಅವಿನಾಶ ಶಿಂಧೆ, ಕೆ.ಕೆ.ಆರ್.ಟಿ.ಸಿ ಎಂ.ಡಿ. ಎಂ.ರಾಚಪ್ಪ, ಕಲಬುರಗಿಯ ಜಯದೇವ ಶಾಖಾ ಆಸ್ಪತ್ರೆಯ ಪ್ರಭಾರಿ ಅಧೀಕ್ಷಕ ಡಾ.ವಿರೇಶ ಪಾಟೀಲ, ಸಮನ್ವಯಾಧಿಕಾರಿ ಸಂತೋಷ್ ಇದ್ದರು.

ನಂತರ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು, ಲೋಕಾರ್ಪಣೆಗೆ ಸಿದ್ದಗೊಂಡಿರುವ ಆಸ್ಪತ್ರೆಯ ವಿವಿಧ ವಿಭಾಗ, ವೇದಿಕೆ ಸ್ಥಳ ಪರಿಶೀಲಿಸಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News