ಕಲಬುರಗಿ | ಜಿಲ್ಲಾ ಮಟ್ಟದ ಪ್ರಥಮ ರಂಗ ಸಾಹಿತ್ಯ ಸಮ್ಮೇಳನದ ಬೃಹತ್ ವೇದಿಕೆ ಸಿದ್ಧ

Update: 2025-04-02 20:34 IST
ಕಲಬುರಗಿ | ಜಿಲ್ಲಾ ಮಟ್ಟದ ಪ್ರಥಮ ರಂಗ ಸಾಹಿತ್ಯ ಸಮ್ಮೇಳನದ ಬೃಹತ್ ವೇದಿಕೆ ಸಿದ್ಧ
  • whatsapp icon

ಕಲಬುರಗಿ : ಸಮಾಜದ ಪರಿವರ್ತನೆಗೆ ಪ್ರಬಲ ಮಾಧ್ಯಮವಾಗಿರುವ ರಂಗಭೂಮಿ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇದೇ ಮೊದಲ ಬಾರಿಗೆ ಎ.3ರ ಗುರುವಾರದಂದು ನಗರದ ಕನ್ನಡ ಭವನದ ಬಾಪುಗೌಡ ದರ್ಶನಾಪೂರ ರಂಗಮಂದಿರದಲ್ಲಿ ಏರ್ಪಡಿಸಿರುವ ಒಂದು ದಿನದ ಜಿಲ್ಲಾ ಮಟ್ಟದ ಪ್ರಥಮ ರಂಗ ಸಾಹಿತ್ಯ ಸಮ್ಮೇಳನದ ವೇದಿಕೆ ಬೃಹತ್ ಅಲಂಕೃತವಾಗಿ ಸಿದ್ಧಗೊಂಡಿದೆ.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಅಧಿಕಾರ ವಹಿಸಿಕೊಂಡ ನಂತರ ಕನ್ನಡ ಸಾರಸ್ವತ ಲೋಕದಲ್ಲಿ ವಿನೂತನಕ್ಕೆ ಹೆಸರಾಗಿದ್ದು, ಸಾಹಿತ್ಯ ಕ್ಷೇತ್ರದ ಇತಿಹಾಸದಲ್ಲೀಗ ಮೊದಲ ಪ್ರಯೋಗ ಎನ್ನುವಂತೆ, ಈ ರಂಗ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಭವನ ಸಂಪೂರ್ಣ ಸಜ್ಜುಗೊಂಡಿದೆ.

ರoಗಭೂಮಿ ಇತಿಹಾಸದಲ್ಲಿಯೇ ಇದೊಂದು ಸುಂದರ ಸಮ್ಮೇಳನ. ಇಂತಹ ಸಮ್ಮೇಳನ ಈ ಹಿಂದೆ ನಡೆದಿಲ್ಲ. ವೃತ್ತಿ ರಂಗವೈಭವದ ಸಮದರ್ಭಗಳನ್ನು, ಬಣ್ಣದ ಬದುಕಿನ ನಿಜದ ಹಿಂದಿನ ಕಥನವನ್ನು, ಬಣ್ಣ ಮಾಸಿದ ಮೇಲೆ ಆಗುವ ಯಾತನಾದಾಯಕ ಜೀವನದ ಚಿತ್ರಣವನ್ನು, ರಂಗಭೂವಿಯಿಂದಲೇ ಶ್ರೀಮಂತ ಬದುಕನ್ನು ಕಟ್ಟಿಕೊಂಡ ಅನೇಕ ಕಲಾವಿದರನ್ನು, ರಂಗ ನಟರನ್ನೇ ನೆಚ್ಚಿಕೊಂಡು ನಾಟಕಗಳನ್ನು ಮಾಡಿಸುವ ಮೂಲಕ ರಂಗ ಪ್ರೀತಿಯನ್ನು ಹೊಂದಿರುವ ಅಳ್ಳೋಳ್ಳಿ ಗದ್ದುಗೆಮಠದ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳವರ ಸರ್ವಾಧ್ಯಕ್ಷತೆಯಲ್ಲಿ ಈ ಸಮ್ಮೇಳನ ಜರುಗಲಿದೆ.

ಕಲ್ಯಾಣ ಕರ್ನಾಟಕದ ಕೇಂದ್ರ ಬಿಂದು ಎನಿಸಿರುವ ಜಿಲ್ಲೆಯು ರಂಗಭೂಮಿಗೆ ತವರು ನೆಲ ಎನಿಸಿಕೊಂಡಿದೆ. ಇಲ್ಲಿ ಅನೇಕ ವರ್ಷಗಳಿಂದ ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ ಚಲನಶೀಲವಾಗಿದೆ. ಅನೇಕ ನಾಟಕ ಕಂಪನಿಗಳು ಟೆಮಟ್ ಹಾಕಿ ನಾಟಕಗಳನ್ನು ಮಾಡಿದ್ದವು . ಗ್ರಾಮೀಣ ಪ್ರದೇಶದಲ್ಲಿ ಹವ್ಯಾಸಿಯಾಗಿ ಅನೇಕರು ರಂಗಭೂಮಿಯನ್ನು ಜೀವಂತವಾಗಿರಿಸಿದ್ದಾರೆ. ಇಂಥ ಅನೇಕ ನಾಟಕ ಕಲಾವಿದರನ್ನು ಒಂದೆಡೆ ಸೇರಿಸುವ ಪ್ರಯತ್ನದಿಂದ ಈ ಸಮ್ಮೇಳನ ಆಯೋಜಿಸಲಾಗಿದೆ.

ಬೆಳಗ್ಗೆ 9:30 ಕ್ಕೆ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪ್ರಾರಂಭಗೊಳ್ಳುವುದು. ನಂತರ ಉದ್ಘಾಟನಾ ಸಮಾರಂಭದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಹೊತ್ತಿಗೆ ಮಕ್ಕಳ ಕವಿ ಎ.ಕೆ. ರಾಮೇಶ್ವರ ಅಧ್ಯಕ್ಷತೆಯಲ್ಲಿ ನಡೆಯುವ ರಂಗಾಂತರಾಳ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷರ ಬದುಕು-ಸಾಧನೆ ಕುರಿತು ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ, ರಂಗಭೂಮಿ: ಸಮಕಾಲಿನ ತಲ್ಲಣಗಳು ಕುರಿತು ಡಾ.ಸ್ವಾಮಿರಾವ ಕುಲಕರ್ಣಿ, ಗ್ರಾಮೀಣ ರಂಗಭೂಮಿಯ ಸವಾಲುಗಳು ಕುರಿತು ನಾಟಕಕಾರ ಶಿವಣ್ಣ ಹಿಟ್ಟಿನ ಅವರು ಮಾತನಾಡಿಲಿದ್ದಾರೆ.

ಸಮ್ಮೇಳನದ ಮಧ್ಯದಲ್ಲಿ ಲೋಹಿಯಾ ಕಲಾ ತಂಡ, ವಿಶ್ವರಂಗ, ಅಂತರoಗ ಕಲಾ ತಂಡ, ಅಮೃತಪ್ಪ ಅನೂರ ಕವಿಗಳು, ಜ್ಯೋತಿ ಮಾರ್ಲಾ ಹಾಗೂ ತಂಡದವರಿಂದ ರಂಗ ಪ್ರಯೋಗಗಳು ಪ್ರದರ್ಶನಗೊಳ್ಳಲಿವೆ. ಇಂಥ ಅಪರೂಪವಾದ ರಂಗ ಸಾಹಿತ್ಯ ಸಮ್ಮೇಳನವು, ಬಣ್ಣದ ಬದುಕಿನ ವಿವಿಧ ಆಯಾಮಗಳು ಹಾಗೂ ಕಲಾವಿದರ ಜೀವನದ ಸ್ಥಿತಿ-ಗತಿಗಳ ಮೇಲೆ ಬೆಳಕು ಚೆಲ್ಲಲಿದೆ.

ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮಾಸ್ತರ್ ಸಮಾರೋಪ ನುಡಿಗಳನ್ನಾಡಲಿದ್ದು, ಶ್ರೀಧರ ಹೆಗಡೆ, ಆರ್.ಎಸ್. ದೊಡ್ಮನಿ, ದೇವೇಂದ್ರ ದೇಸಾಯಿ ಕಲ್ಲೂರ ಸೇರಿದಂತೆ ಅನೇಕರು ಉಪಸ್ಥಿತರಿರುವರು. ರಂಗಭೂಮಿ ಕ್ಷೇತ್ರದ ಅನೇಕ ಸಾಧಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಗುವುದೆಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಸ್ವಾಗತ ಸಮಿತಿಯ ರಾಜುಗೌಡ ನಾಗನಹಳ್ಳಿ, ಗಿರಿರಾಜ ಯಳಮೇಲಿ, ರಮೇಶ ಚಿಚಕೋಟಿ, ವೇದಿಕೆ ಸಿದ್ಧತೆಯ ಜವಾಬ್ದಾರಿ ವಹಿಸಿರುವ ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಎಂ.ಎನ್. ಸುಗಂಧಿ, ಜ್ಯೋತಿ ಕೋಟನೂರ, ದಿನೇಶ ಮದಕರಿ, ದಿನೇಶ ಮದಕರಿ, ಸೋಮಶೇಖರಯ್ಯ ಹೊಸಮಠ , ಬಸಯ್ಯಾ ಸ್ವಾಮಿ, ಶಿವಕುಮಾರ ಸಿ.ಎಚ್., ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News