ಯಾದಗಿರಿ | ಕಬ್ಬಿನ ಹಣ ಬಾಕಿ ಪಾವತಿಗೆ ಆಗ್ರಹಿಸಿ ರೈತರಿಂದ ಕಾರ್ಖಾನೆ ಮುಂದೆ ದಿಢೀರ್ ಪ್ರತಿಭಟನೆ

ಯಾದಗಿರಿ : ವಡಿಗೇರಾ ತಾಲೂಕಿನ ತುಮಕೂರು ಕೋರ್ ಗ್ರೀನ್ ಶುಗರ್ ಕಾರ್ಖಾನೆ ರೈತರಿಂದ ಕಬ್ಬು ಖರೀದಿಸಿ ಸುಮಾರು ನಾಲ್ಕು ತಿಂಗಳು ಕಳೆದರೂ ಇದುವರೆಗೂ ಬಾಕಿ ಪಾವತಿಸಿಲ್ಲ ಎಂದು ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಕಬ್ಬು ಬೆಳೆಗಾರರು ಬುಧವಾರ ಕಾರ್ಖಾನೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಚಿತ್ತಾಪುರ ತಾಲೂಕು ಘಟಕದ ಅಧ್ಯಕ್ಷ ವಿರೇಶ ಸಾಹುಕಾರ ಕಡಬೂರ, ಕೋರ್ ಗ್ರೀನ್ ಶುಗರ್ ಕಾರ್ಖಾನೆ ಆಡಳಿತ ಮಂಡಳಿ ಕಳೆದ ಮೂರುವರೆ ತಿಂಗಳಿಂದ ಕೋಟಿಗಟ್ಟಲೇ ರೈತರ ಹಣ ಬಾಕಿ ಉಳಿಸಿಕೊಂಡಿದೆ. ಪ್ರತಿ ಎಕರೆ ಕಬ್ಬು ಬೆಳೆಯಬೇಕಾದರೆ ನಮ್ಮ ರೈತರು ಸಾವಿರಾರು ರೂ. ಹಣ ಸಾಲ ಮಾಡಿಕೊಂಡಿದ್ದಾರೆ ಎಂದರು.
ರೈತರಿಂದ ಕಬ್ಬು ಪಡೆಯುವ ಮುನ್ನ ಇಂದ್ರ, ಚಂದ್ರ ಎಂದು ವರ್ಣನೆ ಮಾಡಿ, ಖರೀದಿಸಿದ ನಂತರ ಕ್ಯಾರೇ ಎನ್ನುತ್ತಿಲ್ಲ. ಪ್ರತಿ ರೈತರಿಗೆ ಲಕ್ಷಾಂತರ ರೂ. ಹಣವನ್ನು ಕಾರ್ಖಾನೆ ಬಾಕಿ ಉಳಿಸಿಕೊಂಡಿದೆ. ಅದರ ಬಡ್ಡಿ ಹಣವೇ ದುಪ್ಪಟ್ಟಾಗುತ್ತದೆ. ರೈತರಿಗೆ ಪ್ರತಿ ಹಂತದಲ್ಲಿ ಆಡಳಿತ ಮಂಡಳಿ ಮೋಸ ಮಾಡುತ್ತಿರುವುದು ದುರಂತದ ಸಂಗತಿ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದೊಳಗಾಗಿ ಬಾಕಿ ಹಣ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಏ 8 ರಂದು ಕಾರ್ಖಾನೆ ಎದುರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತರಾದ ನೀಲಕಂಠ ಮೇಲಕಂಡಾ, ಸಿದ್ದು ಕಮರವಾಡಿ, ಮಲ್ಲಿಕಾರ್ಜುನ ಮುತ್ತಗಿ, ಬಸವರಾಜ ಕಮರವಡಗಿ, ತಿಪ್ಪಣ್ಣ ವಗ್ಗರ, ಮಲ್ಲಿನಾಥ ಕರದಳ್ಳಿ ಇದ್ದರು.
ರೈತರ ಸಮಸ್ಯೆಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಬಾಕಿ ಇರುವ ಪಾವತಿಯ ಬಗ್ಗೆ ವರದಿ ಕೇಳಲಾಗಿದ್ದು, ಗುರುವಾರ ಆಹಾರ ಇಲಾಖೆ ಡಿಡಿ ಅವರನ್ನು ಕಾರ್ಖಾನೆಗೆ ಕಳುಹಿಸಿ, ಸಮಗ್ರ ಮಾಹಿತಿ ತರಿಸಿಕೊಂಡು ಒಂದು ವಾರದೊಳಗೆ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.