ಕಲಬುರಗಿ | ಎ.7 ರಂದು ಜಿಲ್ಲಾ ಮಟ್ಟದ ರೈತ ಜಾಗೃತಿ ಸಮಾವೇಶ : ಮಹಾಂತೇಶ ಎಸ್.ಜಮಾದಾರ

ಕಲಬುರಗಿ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ, ಕಲಬುರಗಿ ತಾಲ್ಲೂಕು ಘಟಕ ಅಫಜಲಪುರದ ನೇತೃತ್ವದಲ್ಲಿ ಏ.7 ರಂದು ಬೆಳಗ್ಗೆ 10 ಗಂಟೆಗೆ ಅಫಜಲಪುರ ಪಟ್ಟಣದ ದುಧನಿ ರೋಡ್ ಹತ್ತಿರ ಇರುವ ಶ್ರೀ ಮಳೇಂದ್ರ ಪಂಕ್ಷನ್ ಹಾಲ್ ನಲ್ಲಿ ಜಿಲ್ಲಾ ಮಟ್ಟದ ರೈತ ಜಾಗೃತಿ ಸಮಾವೇಶ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಎಸ್.ಜಮಾದಾರ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭೀಮ ಏತ್ತ ನೀರಾವರಿ ಯೋಜನೆಯಲ್ಲಿ ಸೊನ್ನ ಡ್ಯಾಮ್‌ನಿಂದ ಬಳೂರ್ಗಿ ಮುಖಾಂತರ ಬಿದನೂರ ಕೆರೆವರೆಗೂ ಕಾಲುವೆ ನಿರ್ಮಾಣ ಮಾಡಬೇಕು, ಮಲ್ಲಾಬಾದ್ ಏತ್ತ ನೀರಾವರಿ ಯೋಜನೆ ಕೆಲಸ ಪ್ರಾರಂಭಿಸುವುದು ಸೇರಿದಂತೆ ವಿವಿಧ ರೈತ ಹಕ್ಕು ಒತ್ತಾಯಗಳಿಗೆ ಆಗ್ರಹಿಸಿ ಅಫಜಲಪುರ ತಹಶೀಲ್ದಾರ್ ಕಚೇರಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ಶ್ರೀ ಮಳೇಂದ್ರ ಫಂಕ್ಷನ್ ಹಾಲ್ ವರೆಗೆ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಬೃಹತ್ ಮೆರವಣಿಗೆ ನಡೆಸಿ, ಕೊನೆಗೆ ಜಿಲ್ಲಾ ಮಟ್ಟದ ರೈತ ಜಾಗೃತಿ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಅಂದು ನಡೆಯುವ ಸಮಾವೇಶದಲ್ಲಿ ಕಿಸಾನ್ ನ್ಯೂಸ್ ಚಾನಲ್, ನೂತನವಾಗಿ 51 ಗ್ರಾಮ ಘಟಕಗಳ ಉದ್ಘಾಟನೆ ಮಾಡಲಾಗುವುದು ಹಾಗೂ ಕೃಷಿ ವಿಜ್ಞಾನಿಗಳಾದ ಡಾ.ಜಹೀರ್ ಅಹ್ಮದ್ ಸಸ್ಯ ರೋಗ ಕುರಿತು, ಡಾ.ಮಲ್ಲಿನಾಥ ಹೆಮಾಡಿ ಸಮಗ್ರ ಕೃಷಿ ಕುರಿತು, ಡಾ.ಮಹಾಂತೇಶ ಜೋಗಿ ತೋಟಗಾರಿಗೆ ಕುರಿತು ರೈತರಿಗೆ ಸಲಹೆ ಮತ್ತು ಮಾಹಿತಿ ನೀಡುವರು ಎಂದು ಹೇಳಿದರು.
ಅಫಜಲಪುರ ಹಿರೇಮಠ ಸಂಸ್ಥಾನ ಮಳೇಂದ್ರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಹಾಂತೇಶ ಎಸ್.ಜಮಾದಾರ ನೇತೃತ್ವ ವಹಿಸಿಕೊಳ್ಳುವರು, ತಾಲ್ಲೂಕು ಅಧ್ಯಕ್ಷ ಮಂಜುನಾಥ ನಾಯಿಕೊಡಿ ಅಧ್ಯಕ್ಷತೆ ವಹಿಸುವರು ಹಾಗೂ ತಾಲೂಕು ಸಮಿತಿಯ ಎಲ್ಲಾ ಪದಾಧಿಕಾರಿಗಳು ಭಾಗಿಯಾಗುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಈರಣ್ಣ ಬಜಂತ್ರಿ, ಸಂಗಣಗೌಡ ಗಂಟೆ, ವಿಠಲ್, ಗುಂಡುರಾವ ನಾಗಠಾಣ ಇದ್ದರು.