ಕಲಬುರಗಿ | ಎ.14 ರಂದು ಅದ್ಧೂರಿ ಅಂಬೇಡ್ಕರ್ ಜಯಂತ್ಯೋತ್ಸವ : ಅಂಬಾರಾಯ ಅಷ್ಟಗಿ

Update: 2025-04-05 22:32 IST
Photo of Press meet
  • whatsapp icon

ಕಲಬುರಗಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವ ಜಿಲ್ಲಾ ಸಮಿತಿ ವತಿಯಿಂದ ಇದೇ ಎ.14 ರಂದು ನಗರದಲ್ಲಿ ಅದ್ಧೂರಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಡಾ.ಅಂಬಾರಾಯ ಅಷ್ಟಗಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.9 ರಿಂದ 14ರವರೆಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ವಿವಿಧ ಜಿಲ್ಲೆ, ರಾಜ್ಯಗಳ ಕ್ರೀಡಾಪಟುಗಳು ಈ ಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದರು.

ನಗರ ಮತ್ತು ವಿವಿಧ ಹಳ್ಳಿಗಳಿಂದ ಎ.14 ರಂದು ಸಂಜೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಚರಿತ್ರೆ, ಸ್ಥಬ್ದ ಚಿತ್ರಗಳ ಮೆರವಣಿಗೆ ನಡೆಯಲಿದ್ದು, ರಾಷ್ಟ್ರೀಯ ನಾಯಕರು, ರಾಜ್ಯದ ಸಚಿವರು, ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಮಿತಿ ಗೌರವಾಧ್ಯಕ್ಷ ವಿಠ್ಠಲ ದೊಡ್ಡಮನಿ ಮಾತನಾಡಿ, ಬಹುಜನರ ಸ್ವಾಭಿಮಾನದ ಏಕತಾ ದಿನದ ಅಂಗವಾಗಿ ಅಂಬೇಡ್ಕರ್ ಜಯಂತ್ಯೋತ್ಸವ ಆಚರಿಸುವುದರೊಂದಿಗೆ ಅಂಬೇಡ್ಕರ್ ಮತ್ತು ಭಗವಾನ ಬುದ್ಧರ ಸಂದೇಶ ಜನಮನಕ್ಕೆ ಮುಟ್ಟಿಸಬೇಕಾಗಿದೆ ಎಂದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಎ.9ರಿಂದ ಎ.12ರವರೆಗೆ ನಗರದ ಜಗತ್ ವೃತ್ತದಲ್ಲಿರುವ ಲುಂಬಿನಿ ಕ್ರೀಡಾಂಗಣದಲ್ಲಿ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾ ಸಂಚಾಲಕ ಎಸ್.ಎಸ್.ತಾವಡೆ ತಿಳಿಸಿದರು.

ನಗರದ ಜಗತ್ ಭೀಮ ನಗರದ ವೃತ್ತದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಎ.9ರಂದು ಮಹಿಳೆಯರು ಹಾಗೂ ಪುರುಷರಿಗಾಗಿ ಹಗ್ಗ ಜಗ್ಗಾಟ ಮತ್ತು ಕುಸ್ತಿ ಪಂದ್ಯಾವಳಿ, ಎ.10 ರಂದು ಪುರುಷರ ಕಬಡ್ಡಿ ಪಂದ್ಯಾವಳಿ, ಎ.11 ರಂದು ಪುರುಷರ ವಾಲಿಬಾಲ್ ಪಂದ್ಯಾವಳಿ, ಎ.12ರಂದು ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ನೃತ್ಯಗಳು ಇರಲಿವೆ. ನಿತ್ಯ ಸಂಜೆ 5ರಿಂದ ಸ್ಪರ್ಧೆಗಳು ಪ್ರಾರಂಭವಾಗಲಿದ್ದು, ವಿಜೇತ ತಂಡಗಳಿಗೆ ಸೂಕ್ತ ಬಹುಮಾನವಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಯಂತ್ಯುತ್ಸವ ಸಮಿತಿ ಜಿಲ್ಲಾಧ್ಯಕ್ಷ ವಾಸು ಎಸ್.ವಂಟಿ, ಗುಂಡಪ್ಪ ಲಂಡನಕರ್, ಸುರೇಶ ಹಾದಿಮನಿ, ರಾಜು ಸಂಕಾ, ಗಣೇಶ ವಳಕೇರಿ ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News