ಕಲಬುರಗಿ | ಎ.10ರಿಂದ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರ : ಡಾ.ವಿಶ್ವರಾಜ ಪಾಟೀಲ್

ಕಲಬುರಗಿ : ಚಿಣ್ಣರ ಮೇಳ- 2025ರ ಅಂಗವಾಗಿ ಏ.10ರಿಂದ ಮೇ 5ರವರೆಗೆ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘದ ಸಂಸ್ಥಾಪಕ ಡಾ.ವಿಶ್ವರಾಜ ಪಾಟೀಲ್ ಹೇಳಿದರು.
ನಗರದ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ದಿನ ಮುಂಜಾನೆ 10 ಗಂಟೆಯಿಂದ ಸಂಜೆ 4:30ಗಂಟೆ ವರೆಗೆ ರಂಗ ಶಿಬಿರ ಆಯೋಜನೆ ಮಾಡಲಾಗಿದ್ದು, 5 ವರ್ಷ ಪೂರ್ಣಗೊಂಡ 15 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು ಎಂದು ಹೇಳಿದರು.
ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ ಕಳೆದ 15 ವರ್ಷಗಳಿಂದ ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ನುರಿತ ರಂಗ ನಿರ್ದೇಶಕರಿಂದ ಶಿಬಿರಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಕಲಿಸಲಾಗುತ್ತದೆ ಎಂದರು.
ಶಿಬಿರದಲ್ಲಿ ನಾಟಕ, ಸಂಗೀತ, ನೃತ್ಯ, ಕರಕುಶಲ ಕಲೆ, ಚಿತ್ರಕಲೆ, ಅಜ್ಜಿ ಕಥೆಗಳು, ದೇಸಿ ಸಂತೆ, ವಾದ್ಯಮೇಳ, ಮೂಕಾಭಿನಯ, ಮಕ್ಕಳಿಂದ ಸಾಂಸ್ಕೃತಿಕ ಪ್ರದರ್ಶನ ಸೇರಿದಂತೆ ಹಲವಾರು ಸೃಜನಾತ್ಮಕ ಚಟುವಟಿಕೆಗಳು ನಡೆಯುತ್ತವೆ, ಇದರಿಂದಾಗಿ ಮಕ್ಕಳ ಪ್ರತಿಭೆಯ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಹತ್ತಿರ ಇರುವ ಎಂಎಂಕೆ ಕಾಲೇಜ್ ಆಫ್ ವಿಷುಯಲ್ ಆರ್ಟ್ಸ್ ನಲ್ಲಿ ಈ ಶಿಬಿರ ನಡೆಯಲ್ಲಿದ್ದು, ಆಸಕ್ತರು ಹೆಸರು ನೋಂದಾಯಿಸಕೊಳ್ಳಲು ಹೆಚ್ಚಿನ ಮಾಹಿತಿಗಾಗಿ 9901495905, 8660926667, 7022220144 ನಂಬರ್ ಗೆ ಕರೆ ಮಾಡಬಹುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನೀತಾ ಪಾಟೀಲ್, ಸುರೇಶ ತಳವಾರ ಇದ್ದರು.