ಕಲಬುರಗಿ | ದೇಶದ ಹಸಿರು ಕ್ರಾಂತಿಗೆ ಡಾ.ಜಗಜೀವನರಾಮ್ ಕೊಡುಗೆ ಅಪಾರ : ಇಓ ಕಟ್ಟಿಮನಿ

Update: 2025-04-05 22:03 IST
Photo of Program
  • whatsapp icon

ಕಲಬುರಗಿ : ಅಂದು ಹಸಿವಿನಿಂದ ಬಳಲುತ್ತಿದ್ದ ಭಾರತಕ್ಕೆ ಹಸಿರು ಕ್ರಾಂತಿಯ ಮೂಲಕ ಹಸಿವು ನಿವಾರಣೆ ಮತ್ತು ಸಮೃದ್ಧಿಗೆ ಯತ್ನಿಸಿದ ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನ ರಾಮ್ ಅವರು ನೀಡಿದ ಕೊಡುಗೆ ಇಂದಿನ ಯುವ ಸಮುದಾಯಕ್ಕೆ ಮಾರ್ಗದರ್ಶನವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣಾ ಎಂದು ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು ಹೇಳಿದರು.

ಆಳಂದ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಶನಿವಾರ ಹಮ್ಮಿಕೊಂಡ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಬಾಬು ಜಗಜೀವನ್ ರಾಮ್ ಅವರು ಭಾರತದ ಕೃಷಿ ಕ್ಷೇತ್ರದಲ್ಲಿ ಒಂದು ದೊಡ್ಡ ಕ್ರಾಂತಿಯನ್ನು ತಂದವರು. ಅವರ ನಾಯಕತ್ವದಲ್ಲಿ ದೇಶವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಸಾಗಿತು. ಅವರು ಶೋಷಿತ ಸಮುದಾಯಗಳ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಇಂದು ಅವರ ಜಯಂತಿಯ ಸಂದರ್ಭದಲ್ಲಿ ನಾವೆಲ್ಲರೂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಸಮಾನತೆ ಮತ್ತು ಪ್ರಗತಿಗಾಗಿ ಶ್ರಮಿಸಬೇಕು," ಎಂದು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಮಾದಿಗ ಸಮಾಜ ಅಧ್ಯಕ್ಷ ಲಕ್ಕಪ್ಪ ಎಸ್.ಜಾವಳಿ ಮಾತನಾಡಿ, "ಡಾ. ಬಾಬು ಜಗಜೀವನ್ ರಾಮ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಸಾಮಾಜಿಕ ನ್ಯಾಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಕೃಷಿ ಸಚಿವರಾಗಿ ದೇಶದಲ್ಲಿ ಹಸಿರು ಕ್ರಾಂತಿಯನ್ನು ಉಂಟುಮಾಡಿದ ಹರಿಕಾರರಾಗಿದ್ದಾರೆ. ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿ, ದಲಿತ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಅವರ ಜೀವನ ನಮಗೆ ಆದರ್ಶಪ್ರಾಯವಾಗಿದೆ. ಭಾರತದ ಉಪಪ್ರಧಾನಿಯಾಗಿ ಮತ್ತು ವಿವಿಧ ಖಾತೆಗಳ ಸಚಿವರಾಗಿ ಅವರು ತೋರಿದ ಸಮರ್ಪಣೆ ಮತ್ತು ಸೇವಾ ಮನೋಭಾವ ಇಂದಿಗೂ ಸ್ಮರಣೀಯವಾಗಿದೆ," ಅವರು ತತ್ವಾದರ್ಶಗಳು ಮುನ್ನಡೆಸುವುದರ ಜೊತೆಗೆ ಸಮಾಜ ಬಾಂಧವರು ಶಿಕ್ಷಣ ಸಂಘಟನೆ ಮತ್ತು ತಮ್ಮ ಮೂಲಭೂತ ಹಕ್ಕಿನ ಹೋರಾಟಕ್ಕೆ ಒಗ್ಗೂಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರು ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಗ್ರೇಡ್-2 ತಹಶೀಲ್ದಾರ್‌ ಬಿ.ಜಿ.ಕುದರಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ ಹೋಳ್ಕರ್, ತೋಟಗಾರಿಕೆ ಅಧಿಕಾರಿ ಸುರೇಂದ್ರನಾಥ ಹೊನ್ನಪ್ಪಗೊಳ, ಅಭಿಯಂತರ ಸಂಗಮೇಶ ಬಿರಾದರ, ಕ್ಷೇತ್ರ ಶಿಕ್ಷಣಾಧಿಕಾರಿ ಹೃಷಿಕೇಶ ದಂತಕಾಳೆ ಮತ್ತಿತರ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.

ಮಾದಿಗ ಸಮಾಜದ ಸಮಾಜದ ಜಿಲ್ಲಾ ಮುಖಂಡ ಅಂಬರಾಯ ಚಲಗೇರಾ, ಯಲ್ಲಪ್ಪಾ ಆಲೂರ, ಶ್ಯಾಮರಾಯ ತಂಬಾಕವಾಡಿ, ಪುರಸಭೆ ಸದಸ್ಯ ರಾಜು ಕಟ್ಟಿಮನಿ, ಸಿದ್ಧರಾಮ ಎಲೆನಾವದಗಿ, ಸಂಜಯಕುಮಾರ ಸಾಲೇಗಾಂವ, ಮಹಾದೇವ ಪಡಸಾವಳಿ, ಹರಿದಾಸ ಹಜಾರೆ, ಸಂಜಯಕುಮಾರ ಗಾಯಕವಾಡ, ಚಿದಂಬರಾಯ ಬಾಳಿ, ಮಹೇಂದ್ರ ಲೋಕಂಡೆ, ದೇವಿಂದ್ರ ಬಾಳಿ, ಸಂತೋಷ ಪಡಸಾವಳಿ, ದಯಾನಂದ ಶೇರಿಕಾರ, ಮಲ್ಲಿಕಾರ್ಜುನ ಬೋಳಣಿ, ಅಮೃತ ಕೊರಳಿ ಸೇರಿದಂತೆ ಸಮಾಜ ಬಾಂಧವರು ನಾಗರಿಕರು ಪಾಳ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News