ಕಲಬುರಗಿ | ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಶಾಸಕ ಬಿ.ಆರ್.ಪಾಟೀಲ್ ಸೂಚನೆ

ಕಲಬುರಗಿ : ಗ್ರಾಮೀಣಾಭಿವೃದ್ಧಿ, ಜಲ ಸಂರಕ್ಷಣೆ, ಮತ್ತು ಆರಂಭಿಕ ಸೌಲಭ್ಯಗಳ ಸುಧಾರಣೆಗೆ ಸಂಬಂಧಿಸಿದಂತೆ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ ಕ್ಷೇತ್ರದ ಶಾಸಕ, ನೀತಿ ಮತ್ತು ಯೋಜನಾ ಆಯೋಗದ ರಾಜ್ಯ ಉಪಾಧ್ಯಕ್ಷರಾದ ಬಿ.ಆರ್.ಪಾಟೀಲ್ ಅವರು ಅಧಿಕಾರಿಗಳಿಗೆ ವಿವಿಧ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಆಳಂದ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರೈತರ ಹಿತಾಸಕ್ತಿ, ಪರಿಸರ ಸಂರಕ್ಷಣೆ, ಮತ್ತು ಗ್ರಾಮೀಣ ಜನರ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವಂತಹ ಕೆಲಸಗಳಾಗಬೇಕು ಎಂದರು.
"ಕೆರೆಗಳಲ್ಲಿ ಹೂಳು ತುಂಬಿದ್ದರಿಂದ ಮಳೆಗಾಲದಲ್ಲಿ ನೀರು ಸಂಗ್ರಹಣೆಯ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಹೂಳೆತ್ತಿದರೆ ಕೆರೆಗಳು ಖಾಲಿಯಾಗಿ, ಮಳೆಗಾಲದಲ್ಲಿ ಹೆಚ್ಚು ನೀರು ಸಂಗ್ರಹವಾಗುತ್ತದೆ. ಇದು ರೈತರಿಗೆ ಮತ್ತು ಗ್ರಾಮೀಣ ಭಾಗದ ಅಂತರ್ಜಲ ಮಟ್ಟ ಸುಧಾರಣೆಗೆ ಸಹಾಯಕವಾಗುತ್ತದೆ," ಎಂದು ವಿವರಿಸಿ, ಗ್ರಾಪಂನ 15ನೇ ಹಣಕಾಸು ಯೋಜನೆ ಅಥವಾ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಪಿಡಿಓಗಳಿಗೆ ಸೂಚನೆ ನೀಡಿದರು.
ಜೆಜೆಎಂ ಕಾಮಗಾರಿಯ ಪೈಪ್ ಲೈನ್ ಅಗೆದ ಜಾಗವನ್ನು ಸರಿಪಡಿಸಿ ಗ್ರಾಮೀಣ ಭಾಗದಲ್ಲಿ ಜಲ ಜೀವನ ಮಿಷನ್ (ಜೆಜಿಎಂ) ಯೋಜನೆಯಡಿ ನೀರಿನ ಪೈಪ್ ಲೈನ್ ಕಾಮಗಾರಿಯಲ್ಲಿ ಹಾಳಾದ ರಸ್ತೆಗಳನ್ನು ದುರಸ್ಥಿಗೊಳಿಸಬೇಕು. ರಸ್ತೆ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
"ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜೆಜಿಎಂ ಯೋಜನೆಯ ಉದ್ದೇಶ ಹಳ್ಳಹಿಡಿದುಕೊಂಡಿದೆ. ಇದರ ಉದ್ದೇಶ ಈಡೇರಬೇಕಾದರೆ, ಕಾಮಗಾರಿಯಲ್ಲಿ ಯಾವುದೇ ಅಡೆತಡೆ ಇರಬಾರದು. ರಸ್ತೆಗಳಲ್ಲಿ ಪೈಪ್ ಲೈನ್ ಅಡ್ಡಿಯಾಗುವ ಜಾಗಗಳನ್ನು ತಕ್ಷಣವೇ ಸರಿಪಡಿಸಿ, ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ," ಎಂದು ಹೇಳಿದರು.
ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ :
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿರುವ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯತ್ ಪಿಡಿಓಗಳು, ತಾಲೂಕು ಮಟ್ಟದ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಮುಂದಾಗಬೇಕು "ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿನ ಲಭ್ಯತೆ ಖಚಿತಪಡಿಸಿಕೊಳ್ಳಿ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ, ಅಧಿಕಾರಿಗಳೇ ಹೊಣೆಯಾಗುತ್ತಾರೆ ಮತ್ತು ಅವರ ವಿರುದ್ಧ ಕ್ರಮಜರುಗಿಸಲಾಗುವುದು. "ಜನರ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸುವಲ್ಲಿ ಯಾವುದೇ ರಾಜಿ ಇರಬಾರದು," ಎಂದು ಶಾಸಕರು ತಾಕೀತು ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್, ಪುರಸಭೆ ಮುಖ್ಯ ಅಧಿಕಾರಿ ಸಂಗಮೇಶ್ ಪನಶೆಟ್ಟಿ ಸೇರಿದಂತೆ ಇತರ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೃಷಿಕೇಶ ದಂತಕಾಳೆ, ಜೆಸ್ಕಾಂ ಅಧಿಕಾರಿ ಪ್ರಭು ಮಡ್ಡಿತೋಟ್, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಪಿಡಬ್ಲೂಡಿ ಎಇಇ ಆನಂದ, ಸಿಡಿಪಿಒ ಶ್ರೀಕಾಂತ ಮೇಂಗಜಿ, ಪಿಡಿಒ ರಾಮದಾಸ ಪೂಜಾರಿ, ಮಂಜೂರ ಪಟೇಲ್, ಧರ್ಮಣ್ಣಾ ಇನ್ನಿತರರು ಹಾಜರಿದ್ದರು.