ಕಲಬುರಗಿ | ವಕ್ಫ್ ಕಾಯ್ದೆ ಹಿಂಪಡೆಯುವಂತೆ ಪ್ರಾಂತ ರೈತ ಸಂಘದಿಂದ ಆಗ್ರಹ

ಕಲಬುರಗಿ : ವಿಭಜಕ ಮತ್ತು ಅನ್ಯಾಯದ 'ವಕ್ಫ್ ತಿದ್ದುಪಡಿ ಕಾಯ್ದೆ'ಯನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಜಗತ್ ವೃತ್ತದಲ್ಲಿ ಎರಡು ದಿನಗಳ ಅಹೊರಾತ್ರಿ ಧರಣಿ ಸತ್ಯಾಗ್ರಹ ಬಳಿಕ ಶುಕ್ರವಾರ ಡಿಸಿ ಕಚೇರಿ ವರೆಗೆ ಪಾದಯಾತ್ರೆ ಕೈಗೊಂಡು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
' ವಕ್ಫ್ ತಿದ್ದುಪಡಿ ಮಸೂದೆ' ಶಾಸನವು ಸಂವಿಧಾನ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ದಾಳಿಯಾಗಿದೆ. ಕೋಮು ಧ್ರುವೀಕರಣವನ್ನು ಹೆಚ್ಚಿಸುವ ಮತ್ತು ರಾಷ್ಟ್ರದ ಜಾತ್ಯತೀತ ರಚನೆಗೆ ಹಾನಿ ಮಾಡುವ ಈ ಕಾಯ್ದೆಯ ವಿರುದ್ಧ ಪ್ರತಿಭಟಿಸಲು ದೇಶದ ಎಲ್ಲಾ ಜಾತ್ಯತೀತ ಜನರು ಮತ್ತು ಸಂಘಟನೆಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ ಕಲಬುರಗಿ ಜಿಲ್ಲಾ ಸಮಿತಿ ಬೆಂಬಲಿಸುತ್ತದೆ ಎಂದು ಸಂಘದ ಪದಾಧಿಕಾರಿಗಳು ಕರೆ ನೀಡಿದರು.
ತಿದ್ದುಪಡಿ ಮಾಡಿದ ಕಾಯ್ದೆಯು ಗಮನಾರ್ಹ ಬದಲಾವಣೆಗಳನ್ನು ಮಾಡುತ್ತದೆ, ಇದು ಹಿಂದಿನ ಕಾಯ್ದೆಯಲ್ಲಿ ರೂಪಿಸಲಾದ ಮೂಲಭೂತ ತತ್ವಗಳನ್ನು ದುರ್ಬಲಗೊಳಿಸುತ್ತದೆ. ಈ ತಿದ್ದುಪಡಿಯ ಮೂಲಕ ಬಿಜೆಪಿ ಸರ್ಕಾರವು ಜನರನ್ನು ವಿಭಜಿಸುವ ಗುರಿಯನ್ನು ಹೊಂದಿದ್ದು, ತನ್ನ ಹಿಂದುತ್ವ ಕಾರ್ಯಸೂಚಿಯನ್ನು ಮುಂದಿಡುತ್ತಿದೆ. ಹಿಂದಿನ ಕಾಯ್ದೆಯನ್ನು ಮುಸ್ಲಿಮರು ವ್ಯಾಪಕ ಭೂ ಕಬಳಿಕೆಗೆ ಬಳಸಿಕೊಂಡಿದ್ದಾರೆ ಎಂದು ಅದು ಪದೇ ಪದೇ ಹೇಳಿಕೊಳ್ಳುತ್ತಿದೆ. ಹಾಗಾಗಿ ಇದು ಜನವಿರೋಧಿಯಾಗಿದೆ. ಕೂಡಲೇ ಕೇಂದ್ರ ಸರಕಾರ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಅಲ್ಲದೆ ಕೇಂದ್ರ ಸರಕಾರವು ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲೆಂಡರ್ ಬೆಲೆ ಹೆಚ್ಚಿಸಿ ಸಾಮಾನ್ಯ ಜನರ ಮೇಲೆ ಬರೆ ಹಾಕುತ್ತಿದೆ, ಹೆಚ್ಚಿಸಿದ ದರವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಡ ಹೇರಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ಜಾವೇದ್ ಹುಸೇನ್, ಸುಭಾಷ್ ಹೊಸಮನಿ, ದಿಲೀಪ್ ನಾಗೂರೆ, ರಾಯಪ್ಪಾ ಹುರುಮುಂಜಿ, ದೆವು ಬಿರಾದರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.