ಕಲಬುರಗಿ | ʼಬರಗು-ಕೊರಲೆ ಬೆಳೆಯಲ್ಲಿ ಕ್ಷೇತ್ರೋತ್ಸವʼ ಕಾರ್ಯಕ್ರಮ

ಕಲಬುರಗಿ : ಐ.ಸಿ.ಎ.ಆರ್ - ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ,ಹೈದರಾಬಾದ್, ಜೇವರ್ಗಿ ತಾಲೂಕು ಮಿಲೆಟ್ಸ್ ರೈತ ಉತ್ಪಾದಕ ಸಂಸ್ಥೆ, ಐ.ಸಿ. ಎ.ಆರ್- ಕೃಷಿ ವಿಜ್ಞಾನ ಕೇಂದ್ರ, ಐ.ಸಿ. ಎ.ಆರ್- ಕೃಷಿ ವಿಜ್ಞಾನ ಕೇಂದ್ರ ಇವರ ಸಹಯೋಗದಲ್ಲಿ ಬರಗು ಮತ್ತು ಕೊರಲೆ ಬೆಳೆಯಲ್ಲಿ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಕಾದ್ಯಪೂರ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ, ಹಿರಿಯ ವಿಜ್ಞಾನಿ ಡಾ.ರಾಜು ಜಿ.ಟಿ., ಯುವಕರು ಸಿರಿಧಾನ್ಯ ಬೆಳೆಯುವಲ್ಲಿ ಆಸಕ್ತಿ ತೋರಿಸಬೇಕು ಮತ್ತು ಮಾರುಕಟ್ಟೆ ಸಂಪರ್ಕವನ್ನು ಆಧುನಿಕ ತಂತ್ರಜ್ಞಾನ ಗಳನ್ನು ಬಳಸಿ ವಿನೂತನವಾಗಿ ಮಾಡಿ ಹೆಚ್ಚು ಆದಾಯಗಳಿಸಬೇಕು ಎಂದು ತಿಳಿಸಿದರು.
ತೋಟಗಾರಿಕೆ ವಿಜ್ಞಾನಿ ಡಾ.ಚೇತನ್ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರ ಗಳ ಪಾತ್ರದ ಬಗ್ಗೆ ಮತ್ತು ಸಿರಿಧಾನ್ಯ ಗಳ ಜೊತೆ ಜೊತೆ ತೋಟಗಾರಿಕೆ ಬೆಳೆ ಮತ್ತು ಬಹುವಾರ್ಷಿಕ ಬೆಳೆಗಳನ್ನು ರೈತರು ಅಳವಡಿಸಿಕೊಳ್ಳಬೇಕು ಎಂದರು.
ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ಮಲ್ಲಪ್ಪ ಮಾತನಾಡಿ, ಆರೋಗ್ಯದಲ್ಲಿ ಸಿರಿಧಾನ್ಯಗಳ ಪಾತ್ರ, ಸಿರಿಧಾನ್ಯಗಳಲ್ಲಿರುವ ಪೋಷಕಾಂಶದ ಬಗ್ಗೆ ಮಾಹಿತಿ ಮತ್ತು ಬೇಸಾಯ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಪ್ರಗತಿ ಪರ ಮತ್ತು ಸಿರಿಧಾನ್ಯ ರೈತರಾದ ಸುಭಾಷ್ ರೆಡ್ಡಿ ಮಾತನಾಡಿ, ಬರಗು ಮತ್ತು ಕೊರಲೆ ಬೆಳೆಯಲ್ಲಿ ತಮ್ಮ ಅನುಭವ ಹಂಚಿ ಕೊಂಡರು. ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ಸಿಬ್ಬಂದಿಗಳಾದ ಅಬ್ಬು ಸೇಠ್ ಮತ್ತು ಅನುಪ್ ಸಿರಿಧಾನ್ಯ ಗಳ ಮಾರುಕಟ್ಟೆ ವ್ಯವಸ್ಥೆ ಗೆ ಇರುವ ಅವಕಾಶ ಗಳ ಬಗ್ಗೆ ತಿಳಿಸಿದರು.
ಜೇವರ್ಗಿ ರೈತ ಉತ್ಪಾದಕ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶರಣು ನಿರೂಪಿಸಿದರು. ಅನುಪ್ ಸ್ವಾಗತಿಸಿದರು ಮತ್ತು ಕೈಲಾಶ್ ವಂದಿಸಿದರು.