ಕಲಬುರಗಿ| ಕ್ಷುಲ್ಲಕ ಕಾರಣಕ್ಕೆ ಬಾಮೈದನಿಂದ ಚೂರಿ ಇರಿತ; ಗಾಯಗೊಂಡಿದ್ದ ಬಾವ ಮೃತ್ಯು

ಆನಂದ್ ಕುಮಾರ್ ಬಿಳಿಚಕ್ರ
ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಬಾವವನ್ನು ಬಾಮೈದ(ಪತ್ನಿಯ ಸೋದರ)ನೇ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಬಾವ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿರುವ ಘಟನೆ ನಡೆದಿದೆ.
ಗಾಝಿಪುರದ ನಿವಾಸಿ ಆನಂದ್ ಕುಮಾರ್ ಬಿಳಿಚಕ್ರ (28) ಎಂಬವರು ಚೂರಿ ಇರಿತಕ್ಕೆ ಒಳಗಾಗಿ ತೀವ್ರ ಗಾಯಗೊಂಡು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು (ಶನಿವಾರ) ಚಿಕಿತ್ಸೆ ಫಲಕಾರಿಯಾಗದೆ ಆನಂದ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನಂದ್, ಎರಡು ವರ್ಷದ ಹಿಂದೆ ಸ್ನೇಹಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಗಂಡ ಹೆಂಡತಿಯ ಮಧ್ಯೆ ಜಗಳವಾಗಿ ಸ್ನೇಹಾ ತವರು ಮನೆ ಸೇರಿದ್ದಳು ಎನ್ನಲಾಗಿದೆ. ಇದೀಗ ಆನಂದ್ ತನ್ನ ಅಣ್ಣನ ಮದುವೆ ಹಿನ್ನೆಲೆಯಲ್ಲಿ ಮನೆಗೆ ಬರುವಂತೆ ಸ್ನೇಹಾರನ್ನು ಕರೆಯಲು ತೆರಳಿದ್ದರು. ಇದೇ ವೇಳೆ ಆರೋಪಿ ಟೋನಿ ಮತ್ತು ಆತನ ಸ್ನೇಹಿತರು ಸೇರಿ ಆನಂದ್ ಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಬ್ರಹ್ಮಪೂರ ಠಾಣೆಯ ಪೊಲೀಸರು, ಟೋನಿ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.