ಕಲಬುರಗಿ | ಜಿಮ್ಸ್ ಆಸ್ಪತ್ರೆಗೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಭೇಟಿ
ಕಲಬುರಗಿ : ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ರವಿವಾರ ಮಧ್ಯಾಹ್ನ ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳನ್ನು ವಿಚಾರಿಸಿದಲ್ಲದೆ ಯಾವುದೇ ಕಾರಣಕ್ಕೂ ಹೊರಗಡೆಯಿಂದ ಔಷಧಿ ತರಲು ರೋಗಿಗಳಿಗೆ ಸೂಚಿಸಿದಂತೆ ವೈದ್ಯರಿಗೆ ತಾಕೀತು ಮಾಡಿದರು.
ಸರಕಾರ ಪ್ರತಿ ಜಿಲ್ಲಾ ಆಸ್ಪತ್ರೆಗೆ 25 ಸಾವಿರ ರೂ., ತಾಲ್ಲೂಕು ಆಸ್ಪತ್ರೆಗೆ 10 ಸಾವಿರ ರೂ. ಔಷಧಿ ಖರೀದಿಗೆ ಹಣ ನೀಡುತ್ತಿದೆ. ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿಲ್ಲದಿದ್ದಲ್ಲಿ ಈ ಹಣ ಬಳಸಿ ಹೊರಗಡೆಯಿಂದ ಔಷಧಿ ತಂದು ರೋಗಿಗಳಿಗೆ ನೀಡಬೇಕು. ವಿನಾಕಾರಣ ರೋಗಿಗಳಿಗೆ ತೊಂದರೆ ಕೊಡಬಾರದು ಎಂದು ವೈದ್ಯರಿಗೆ ನಿರ್ದೇಶನ ನೀಡಿದರು.
ಆಸ್ಪತ್ರೆಯ ಔಷದ ಕೇಂದ್ರ, ಸ್ಕ್ಯಾನಿಂಗ್ ಸೆಂಟರ್, ಮಹಿಳಾ ವಾರ್ಡ್, ಪರುಷರ ವಾರ್ಡ್ ಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು, ರೋಗಿಗಳ ಸಮಸ್ಯೆ ಆಲಿಸಿದಲ್ಲದೇ ಅವರನ್ನು ಆಸ್ಪತ್ರೆಯಲ್ಲಿ ಉಪಚರಿಸುವ ರೀತಿ ಮತ್ತು ವೈದ್ಯಕೀಯ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡರು. ರೋಗಿಗಳಿಗೆ ಪೂರೈಸುವ ಊಟ ತಯಾರಿಸುವ ಅಡುಗೆ ಕೋಣೆ ಸಹ ಪರಿಶೀಲಿಸಿದರು. ಆಸ್ಪತ್ರೆ ಸ್ವಚ್ಛವಾಗಿಟ್ಟುಕೊಳ್ಳುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸಿದರು.
ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಸೇವೆಯಲ್ಲಿ ವ್ಯತ್ಯಯವಾದಲ್ಲಿ ಲೋಕಾಯುಕ್ತ ಸಂಸ್ಥೆಗೆ ಸಂಪರ್ಕಿಸಲು ಮಾಹಿತಿಯನ್ನು ಎಲ್ಲಾ ವಾರ್ಡ್ ಗಳಲ್ಲಿ ಪ್ರಕಟಿಸುವಂತೆ ಇದೇ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಪರ ನಿಬಂಧಕರಾದ ಜೆ.ವಿ.ವಿಜಯಾನಂದ, ಗಿರೀಶ ಭಟ್ ಕೆ., ಅರವಿಂದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ, ಕಲಬುರಗಿ ಲೋಕಾಯುಕ್ತ ಎಸ್.ಪಿ. ಬಿ.ಕೆ.ಉಮೇಶ ಉಪಸ್ಥಿತರಿದ್ದರು.