ಕಲಬುರಗಿ | ಲೋಕಾಯುಕ್ತ ಬಲ ಹೆಚ್ಚಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ : ನ್ಯಾ.ಬಿ.ವೀರಪ್ಪ

Update: 2024-11-17 16:09 GMT

ಕಲಬುರಗಿ : ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ 20 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ಬಾಕಿ ಇದ್ದು, ರಾತ್ರಿ 7-8 ಗಂಟೆವರೆಗೂ ಕುಳಿತು ಪ್ರಕರಣ ವಿಲೇವಾರಿ ಮಾಡುತ್ತಿದ್ದರೂ ಜನರ ನಿರೀಕ್ಷೆಗೆ ತಕ್ಕಂತೆ ತ್ವರಿತ ವಿಲೇವಾರಿಯಾಗುತ್ತಿಲ್ಲ. ಹೀಗಾಗಿ ಸಂಸ್ಥೆಗೆ ಹೆಚ್ಚಿನ ಅಧಿಕಾರಿ, ಸಿಬ್ಬಂದಿ ಬಲ ನೀಡುವುದರ ಜೊತೆಗೆ ಮೂಲಸೌಕರ್ಯ ಹೆಚ್ಚಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಹೇಳಿದ್ದಾರೆ.

ರವಿವಾರ ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ತಮ್ಮ ಮೂರು ದಿನಗಳ ಕಲಬುರಗಿ ಪ್ರವಾಸ ಕಾರ್ಯಕ್ರಮದ ಕುರಿತು ವಿವರಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಓರ್ವ ಲೋಕಾಯುಕ್ತರು, ಇಬ್ಬರು ಉಪ ಲೋಕಾಯುಕ್ತರು 7 ಕೋಟಿ ಕನ್ನಡಿಗರ ಸಮಸ್ಯೆ ಆಲಿಸುವ ಪರಿಸ್ಥಿತಿ ಇದೆ. ಇಬ್ಬರು ಉಪ ಲೋಕಾಯುಕ್ತರು ತಲಾ 15 ಜಿಲ್ಲೆಗಳನ್ನು ಹಂಚಿಕೆ ಮಾಡಿಕೊಂಡು ಜಿಲ್ಲೆಗೆ ಹೋಗಿ ಅಲ್ಲಿಯೇ ದೂರುದಾರ-ನೌಕರರ ಸಮಕ್ಷಮ ಆಲಿಸಿ ಪ್ರಕರಣ ವಿಲೇವಾರಿಗೆ ಆದ್ಯತೆ ನೀಡಲಾಗುತ್ತಿದೆ ಎಂದ ಅವರು, ಕಲಬುರಗಿ ಮತ್ತು ಧಾರವಾಡ ವಿಭಾಗಕ್ಕ ಓರ್ವ ಲೋಕಾಯುಕ್ತರ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ತಮ್ಮ ಮೂರು ದಿನಗಳ ಕಲಬುರಗಿ ಪ್ರವಾಸದಲ್ಲಿ ಕಲಬುರಗಿ ಕೋಟೆ, ಸೂಪರ್ ಮಾರ್ಕೆಟ್ ಪ್ರದೇಶ, ಉದನೂರು ತ್ಯಾಜ್ಯ ವಿಲೇವಾರಿ ಘಟಕ, ಸರಕಾರಿ ಶಾಲೆ, ಕೇಂದ್ರ ಬಸ್ ನಿಲ್ದಾಣ, ಬಾಲಕರ-ಬಾಲಕೀಯರ ವಸತಿ ನಿಲಯ, ಆಸ್ಪತ್ರೆ, ಕೇಂದ್ರ ಕಾರಾಗೃಹಕ್ಕೆ ಭೇಟಿ ಅಲ್ಲಿರುವಂತಹ ಲೋಪದೋಷ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದ ನ್ಯಾ.ಬಿ.ವೀರಪ್ಪ ಅವರು, ಕಲಬುರಗಿ ಕೋಟೆ ಸುತ್ತ 2 ತಿಂಗಳಲ್ಲಿ ಸ್ವಚ್ಛತೆ ಕೈಗೊಳ್ಳದಿದ್ದರೆ ಮುಂದಿನ ದಿನದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದೆಂದು ಈಗಾಗಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗಗಳು ಇತ್ತೀಚೆಗೆ ನಿಶಕ್ತವಾಗಿವೆ. ಈ ನಾಲ್ಕು ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸಿದಲ್ಲಿ ಭ್ರಷ್ಟಾಚಾರ ಕಿತ್ತೆಗೆಯಬಹುದಾಗಿದೆ ಎಂದ ಅವರು, ಚುನಾವಣೆ ಸಮಯದಲ್ಲಿ ಜನ ಜನಪ್ರತಿನಿಧಿಗಳ ಮುಂದೆ ಬಿಡಿ ಕಾಸಿಗೆ ಕೈ ಚಾಚುವುದನ್ನು ನಿಲ್ಲಿಸಬೇಕಿದೆ. ಪ್ರತಿ ಮನೆಯಿಂದ ಭ್ರಷ್ಟಾಚಾರ ನಿರ್ಮೂಲನೆ ಆಗಬೇಕಿದೆ ಎಂದರು.

ಪ್ರವಾಸದ ಮೊದಲನೇ ದಿನದಂದು ಬೆಳಿಗ್ಗೆಯಿಂದ ರಾತ್ರಿ ವರೆಗೆ ಸಾರ್ವಜನಿಕರ ಅಹವಾಲು ಆಲಿಸಲಾಗಿದ್ದು, ಸಲ್ಲಿಕೆಯಾದ ಸುಮಾರು 350 ಅರ್ಜಿ ಪೈಕಿ 70ಕ್ಕೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದೆ. ಕೆಲ ಪ್ರಕರಣಗಳನ್ನು ದೂರು ದಾಖಲಿಸಿಕೊಂಡಿದ್ದೇವೆ. ಇನ್ನು ಈಗಾಗಲೇ ದಾಖಲಾದ ಪ್ರಕರಣಗಳ ಪೈಕಿ ಹಳೆಯ 50 ಮತ್ತು ಹೊಸದಾಗಿ ಸಲ್ಲಿಸಿದ 48 ಪ್ರಕರಣಗಳನ್ನು ಕಲಬುರಗಿಯಲ್ಲಿಯೇ ಇತ್ಯರ್ಥ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಪರ ನಿಬಂಧಕರಾದ ಜೆ.ವಿ.ವಿಜಯಾನಂದ, ಗಿರೀಶ ಭಟ್ ಕೆ., ಅರವಿಂದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ, ಕಲಬುರಗಿ ಲೋಕಾಯುಕ್ತ ಎಸ್.ಪಿ. ಬಿ.ಕೆ.ಉಮೇಶ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News