ಬಿಜೆಪಿ ಭಯೋತ್ಪಾದಕರ ಪಕ್ಷ : ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು

Update: 2024-10-12 13:49 GMT

ಕಲಬುರಗಿ : ಅರ್ಬನ್ ನಕ್ಸಲರು ಕಾಂಗ್ರೆಸ್ ಪಕ್ಷವನ್ನು ನಡೆಸುತ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ʼಬಿಜೆಪಿ ಭಯೋತ್ಪಾದಕರ ಪಕ್ಷʼ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼಬಿಜೆಪಿ ಪಕ್ಷದವರೇ ಕೆಳವರ್ಗದ ಜನರಿಗೆ ಹೊಡೆಯುತ್ತಾರೆ, ಬುಡಕಟ್ಟು ಸಮುದಾಯದವರನ್ನು ತಂದು ಅವರ ಮೇಲೆ ಅತ್ಯಾಚಾರ ನಡೆಸುತ್ತಾರೆʼ ಎಂದು ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʼಬಿಜೆಪಿಯವರು ದುಷ್ಕೃತ್ಯ ನಡೆಸುವವರಿಗೆ ಸಹಕಾರ ನೀಡುತ್ತಿರುತ್ತಾರೆ. ಚಿಂತಕರಿಗೆ, ಕಾಂಗ್ರೆಸ್ ಪಕ್ಷದವರಿಗೆ ಅರ್ಬನ್ ನಕ್ಸಲ್ ಎಂದು ಕರೆಯುವುದು ಬಿಜೆಪಿಗೆ ಚಾಳಿ ಇದೆ. ಈ ಮಧ್ಯೆ ಇದನ್ನು ಹೇಳುವುದನ್ನು ನಿಲ್ಲಿಸಿದ್ದರೂ ಇದೀಗ ಮತ್ತೆ ಹೇಳಲು ಪ್ರಾರಂಭಿಸಿದ್ದಾರೆʼ ಎಂದು ಟೀಕಿಸಿದರು.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕುರಿತು ಪ್ರಕ್ರಿಯೆ ನೀಡಿ, ʼಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂದು ಇಡೀ ದೇಶದ ಜನರಿಗೆ ವಿಶ್ವಾಸವಿತ್ತು. ಜನ ಸಮುದಾಯದಲ್ಲಿ ಜನರ ಅಭಿಪ್ರಾಯ ಕಾಂಗ್ರೆಸ್ ಪಕ್ಷದ ಪರವಾಗಿಯೇ ಇತ್ತು. ಆದಾಗ್ಯೂ ಚುನಾವಣಾ ಫಲಿತಾಂಶ ಬೇರೆಯದ್ದೇ ರೀತಿಯಲ್ಲಿ ಬಂದಿದೆ. ಚುನಾವಣಾ ಪ್ರಕ್ರಿಯೆ ಮೇಲೆ ಅನುಮಾನ ಕಾಡುತ್ತಿದೆʼ ಎಂದರು.

ʼಈ ರೀತಿಯ ಫಲಿತಾಂಶ ಬರಲು ಏನು ಕಾರಣ ಎಂಬುದರ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬೂತ್ ಮಟ್ಟದಿಂದ ವರದಿ ತರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಒಂದೊಮ್ಮೆ ವರದಿ ಬಂದ ಬಳಿಕ ತಪ್ಪು ನಮ್ಮ ಪಕ್ಷದ ಕಾರ್ಯಕರ್ತರದ್ದೋ, ಅಥವಾ ಈ ಚುನಾವಣಾ ಪ್ರಕ್ರಿಯೆಯಲ್ಲಿ ಮತ್ತೇನಾದರೂ ಅಸಂಬದ್ಧತೆ ನಡೆದಿದೆಯೋ ಎಂಬುದರ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆʼ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News