ವಸ್ತ್ರ ಸಂಹಿತೆ: ಶ್ರೀ ಮಹಾ ಮೃತ್ಯುಂಜಯ ದೇವಾಲಯ ಸಮಿತಿಗೆ ಮತ್ತೆ ಫೆ.10ರವರೆಗೆ ಕಾಲಾವಕಾಶ ನೀಡಿದ ಕೊಡಗು ಜಿಲ್ಲಾಡಳಿತ
ಮಡಿಕೇರಿ: ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡುವಿನ ಶ್ರೀ ಮಹಾ ಮೃತ್ಯುಂಜಯ ದೇವಾಲಯ ಸಮಿತಿಯು ವಸ್ತ್ರ ಸಂಹಿತೆ ಕುರಿತು ಜ.5 ರಂದು ನಡೆಸಿದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಕಾರಣ ನಮಗೆ ಮತ್ತಷ್ಟು ಸಮಯಾವಕಾಶ ಬೇಕೆಂದು ಸಮಿತಿ ಕೋರಿರುವ ಹಿನ್ನೆಲೆಯಲ್ಲಿ ಫೆ.10ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಜ.5ರಂದು ನಡೆದ ಸಭೆಯ ವರದಿಯನ್ನು ಮಂಡಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಇರುವುದಕ್ಕೆ ಕಾರಣಗಳನ್ನು ನೀಡಿದರು. ಗೊಂದಲ ನಿವಾರಣೆಗೆ ಒಂದು ತಿಂಗಳ ಕಾಲಾವಕಾಶಬೇಕೆಂದು ಕೋರಿದ ಹಿನ್ನೆಲೆಯಲ್ಲಿ ಫೆ.10ರವರೆಗೆ ಕಾಲಾವಕಾಶ ನೀಡಲಾಗಿದೆ.
ಈ ಅವಧಿಯವರೆಗೆ ಕಳೆದ ಏಳು ದಿನಗಳಿಂದ ದೇವಾಲಯ ವ್ಯಾಪ್ತಿಯಲ್ಲಿ ಇದ್ದ ಪರಿಸ್ಥಿತಿಯೇ ಮುಂದುವರೆಯಲಿದೆ. ಸೆಕ್ಷನ್ 163 ಅಡಿಯಲ್ಲಿ ವಿಧಿಸಲಾಗಿರುವ ನಿರ್ಬಂಧದ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ದೇವಾಲಯದ ನಿತ್ಯ ಪೂಜೆಗೆ ಹಾಗೂ ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ದೇವಾಲಯ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದೆಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಸಮಿತಿ ಅಧ್ಯಕ್ಷರ ಪ್ರತಿಕ್ರಿಯೆ
ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ಶಶಿ ಜನಾರ್ಧನ ಅವರು, ಜ.5 ರಂದು ನಡೆದ ಸಮಿತಿ ಸಭೆಯಲ್ಲಿ ಹಬ್ಬದ ಕೊನೆಯ ದಿನ ಸಾಂಪ್ರದಾಯಿಕ ಉಡುಗೆ ತೊಡಲು ಸ್ಥಳೀಯ ಗ್ರಾಮಸ್ಥರಿಗೆ ಮಾತ್ರ ಅವಕಾಶ ನೀಡಲು ಪ್ರಸ್ತಾಪಿಸಲಾಗಿತ್ತು. ಆದರೆ ಇದಕ್ಕೆ ಸಭೆಯಲ್ಲಿದ್ದ 44 ಮಂದಿಯಲ್ಲಿ 13 ಮಂದಿ ವಿರೋಧ ವ್ಯಕ್ತಪಡಿಸಿ, ಜಿಲ್ಲೆಯ ಎಲ್ಲರಿಗೂ ಸಾಂಪ್ರದಾಯಿಕ ಉಡುಗೆ ತೊಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು. ಆದ್ದರಿಂದ ಸಭೆಯಲ್ಲಿ ವಸ್ತ್ರ ಸಂಹಿತೆ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲವೆಂದರು.
ಪ್ರಸ್ತುತ ದೇವಾಲಯದಲ್ಲಿ ಈ ಹಿಂದೆ ಇದ್ದ ಕ್ರಮವನ್ನೇ ಮುಂದುವರೆಸಲು ಸಮಿತಿ ಬದ್ಧವಾಗಿದೆ. ಇದೀಗ ಜಿಲ್ಲಾಧಿಕಾರಿಗಳು ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶ ನೀಡಿರುವ ಕ್ರಮವನ್ನು ಸ್ವಾಗತಿಸುವುದಾಗಿ ತಿಳಿಸಿದರು.