ಪೊನ್ನಂಪೇಟೆ | ಪತ್ನಿ-ಪುತ್ರಿ ಸಹಿತ ನಾಲ್ವರ ಹತ್ಯೆ; ಆರೋಪಿ ಪತಿ ಪರಾರಿ
Update: 2025-03-28 16:19 IST

ಮಡಿಕೇರಿ : ವ್ಯಕ್ತಿಯೊಬ್ಬ ತನ್ನ ಪತ್ನಿ, ಪುತ್ರಿ, ಅತ್ತೆ ಹಾಗೂ ಮಾವನನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿರುವ ಘಟನೆ ಇಂದು(ಶುಕ್ರವಾರ) ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.
ಕೇರಳ ಮೂಲದ ಗಿರೀಶ್(35) ಎಂಬಾತ ಕೊಲೆ ಆರೋಪಿಯಾಗಿದ್ದು, ಘಟನೆ ಬಳಿಕ ತಲೆ ಮರೆಸಿಕೊಂಡಿದ್ದಾನೆ. ಈತನ ಮಾವ ಕರಿಯ(75), ಅತ್ತೆ ಗೌರಿ(70), ಪತ್ನಿ ನಾಗಿ(30) ಹಾಗೂ ಪುತ್ರಿ ಕಾವೇರಿ(5) ಕತ್ತಿಯಿಂದ ಕೊಚ್ಚಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.
ಏಳು ವರ್ಷಗಳ ಹಿಂದೆ ಗಿರೀಶ್ ಹಾಗೂ ನಾಗಿ ವಿವಾಹವಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರ್ಮಿಕರಾಗಿರುವ ದಂಪತಿ ಹಾಗೂ ಪುತ್ರಿ ಇತ್ತೀಚೆಗೆ ಬೇಗೂರಿನ ಮಾವನ ಮನೆಗೆ ಬಂದು ವಾಸವಿದ್ದರು ಎಂದು ಹೇಳಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಗಿರೀಶ್ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.