ವಿರಾಜಪೇಟೆ | ಕಾಡಾನೆ ದಾಳಿಗೆ ರೈತ ಬಲಿ

ಮಡಿಕೇರಿ : ಕಾಡಾನೆ ದಾಳಿಯಿಂದ ರೈತರೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರೆಗುಂದಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಚಿಣ್ಣಪ್ಪ (76) ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯರಾತ್ರಿ ಮನೆಯ ಸಮೀಪ ಏನೋ ಶಬ್ಧವಾಗುತ್ತಿದೆ ಎಂದು ಬಾಗಿಲು ತೆರೆದು ಹೊರ ಬಂದಾಗ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಈ ಸಂದರ್ಭ ಚಿಣ್ಣಪ್ಪ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕಾಡಾನೆ ವಿರುದ್ಧ ಅರಣ್ಯ ಇಲಾಖೆ ಸೂಕ್ತ ಕಾರ್ಯಾಚರಣೆ ನಡೆಸಲಿದೆ ಎಂದು ಭರವಸೆ ನೀಡಿದರು.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು, ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.