ʼಕುಪ್ಯಚೇಲೆʼ ಧರಿಸಿದವರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಪ್ರಕರಣ | ಕೊಡಗಿನ ವಿವಿಧೆಡೆ ರಸ್ತೆ ತಡೆದು ಪ್ರತಿಭಟನೆ
ಮಡಿಕೇರಿ : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಜಾತ್ರೋತ್ಸವದ ಸಂದರ್ಭ ಸಾಂಪ್ರದಾಯಿಕ ಕೊಡವ ಉಡುಪು ಕುಪ್ಯಚೇಲೆ ತೊಟ್ಟವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡದಿರುವುದನ್ನು ಖಂಡಿಸಿ ಜಿಲ್ಲೆಯ ವಿವಿಧೆಡೆ ಕೊಡವ ಸಮುದಾಯದವರು ರಸ್ತೆ ತಡೆದು ಪ್ರತಿಭಟನೆ ನಡೆದರು.
ದೇವಸ್ಥಾನ ಸಮಿತಿಯ ನಿಲುವಿನ ವಿರುದ್ಧ ಕೊಡವ ಸಮುದಾಯದ ವಿವಿಧ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದವು. ದಕ್ಷಿಣ ಕೊಡಗಿನ ವಿರಾಜಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಮಡಿಕೇರಿ ತಾಲ್ಲೂಕಿನ ಮೂರ್ನಾಡು, ನಾಪೋಕ್ಲುವಿನಲ್ಲಿ ಪ್ರತಿಭಟನೆ ನಡೆಯಿತು.
ಕಟ್ಟೆಮಾಡು ಭಾಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪೊನ್ನಂಪೇಟೆಯಿಂದ ಕಟ್ಟೆಮಾಡು ದೇವಾಲಯಕ್ಕೆ ಬೈಕ್ ಜಾಥ ನಡೆಸಲು ಮುಂದಾದವರನ್ನು ಪೊಲೀಸರು ವಶಕ್ಕೆ ಪಡೆದರು.
ಬೈಕ್ ಜಾಥಕ್ಕೆ ಸಜ್ಜಾಗಿದ್ದ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ಚಮ್ಮಟಿರ ಪ್ರವೀಣ್ ಉತ್ತಪ್ಪ ಹಾಗೂ ಸಣ್ಣುವಂಡ ದರ್ಶನ್ ಕಾವೇರಪ್ಪ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು, ಅವರನ್ನು ಕೆಲ ಕಾಲ ಅಲ್ಲಿರಿಸಿಕೊಂಡು ಜಾಥ ಹೊರಡದಂತೆ ಮನವೊಲಿಸುವ ಪ್ರಯತ್ನಗಳನ್ನು ಮಾಡಿದರು. ಈ ಹಂತದಲ್ಲಿ ಪೊನ್ನಂಪೇಟೆ ಠಾಣೆಯ ಮುಂಭಾಗ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಜಾಥಾ ಹೊರಟವರನ್ನು ಪೊಲೀಸರು ವಶಕ್ಕೆ ಪಡೆದ ಕ್ರಮವನ್ನು ವಿರೋಧಿಸಿ ಹುದಿಕೇರಿಯಲ್ಲಿ “ಬಂದ್” ಆಚರಿಸಲಾಯಿತು. ಜಾಥ ಆಯೋಜಕರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆಯನ್ನು ನಡೆಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಪೊಲೀಸ್ ವಶದಲ್ಲಿದ್ದ ಮೂವರನ್ನು ಬಿಡುಗಡೆ ಮಾಡಲಾಯಿತು.
ಗೋಣಿಕೊಪ್ಪಲು ಕೊಡವ ಸಮಾಜ ಹಾಗೂ ಇಗ್ಗುತ್ತಪ್ಪ ಕೊಡವ ಸಮಾಜ ಸೇರಿದಂತೆ ವಿವಿಧ ಕೊಡವ ಸಂಘಟನೆಗಳ ಮನವಿಯ ಮೇರೆಗೆ ಗೋಣಿಕೊಪ್ಪಲುವಿನಲ್ಲಿ ಮಧ್ಯಾಹ್ನದ ಬಳಿಕ ಸಂಜೆ 4 ಗಂಟೆವರೆಗೆ ಸ್ವಯಂಪ್ರೇರಿತ ಬಂದ್ ನಡೆಯಿತು.
ಮಡಿಕೇರಿ ತಾಲ್ಲೂಕಿನ ನಾಪೋಕ್ಲುವಿನಲ್ಲಿ ನಾಲ್ಕು ನಾಡಿನ ಕೊಡವ ಸಮುದಾಯದವರು ನಾಪೋಕ್ಲು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಬೃಹತ್ ಮಾನವ ಸರಪಳಿ ರಚಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಮಹಾಮೃತ್ಯುಂಜಯ ದೇವಾಲಯ ವ್ಯಾಪ್ತಿಯಲ್ಲಿ ಪೊಲೀಸ್ ಸರ್ಪಗಾವಲು :
ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಐದು ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜಾಥಾ ನಡೆಸುವ ಸಾಧ್ಯತೆಗಳಿರುವುದರಿಂದ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಕೊಡವ ಮತ್ತು ಗೌಡ ಎರಡು ಜನಾಂಗಗಳ ನಡುವಿನ ಭಿನ್ನಾಭಿಪ್ರಾಯದಿಂದ ಗೊಂದಲ ಸೃಷ್ಟಿಯಾಗಿದ್ದು, ಉಭಯ ಗುಂಪು ಸೋಮವಾರ ಕಟ್ಟೆಮಾಡಿಗೆ ಜಾಥಾ ನಡೆಸುವ ಕುರಿತು ಹೇಳಿಕೆ ನೀಡಿದ್ದ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಎಸ್‍ಪಿ ಎಚ್ಚರಿಕೆ :
ಈಗಾಗಲೇ ದೇವಾಲಯದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಯಾರಾದರೂ ಶಾಂತಿಭಂಗ ಮಾಡಲು ಯತ್ನಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.