ಮಡಿಕೇರಿ | ಬೇಂಗ್‍ನಾಡ್ ಕೊಡವ ಸಮಾಜದಿಂದ ಚೇರಂಬಾಣೆಯಲ್ಲಿ ಪ್ರತಿಭಟನೆ
ಮಡಿಕೇರಿ : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ಜಾತ್ರೋತ್ಸವದ ಸಂದರ್ಭ ಕುಪ್ಯಚೇಲೆ ಧರಿಸಿ ಹೋದ ಕೊಡವರನ್ನು ತಡೆಯಲಾಗಿದೆ ಎಂದು ಆರೋಪಿಸಿ ಬೇಂಗ್‍ನಾಡ್ ಕೊಡವ ಸಮಾಜದ ಪ್ರಮುಖರು ಹಾಗೂ ಸದಸ್ಯರು ಚೇರಂಬಾಣೆಯಲ್ಲಿ ಪ್ರತಿಭಟನೆ ನಡೆಸಿದರು.
ಚೇರಂಬಾಣೆ ನಗರದಲ್ಲಿ ಒಂದು ಗಂಟೆಗಳ ಕಾಲ ಸ್ವಯಂ ಘೋಷಿತ ಬಂದ್ ಆಚರಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು ಪ್ರಕಣದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ನಾಪಂಡ ಗಣೇಶ್, ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ಗಣಪತಿ, ಉಪಾಧ್ಯಕ್ಷ ಕೇಕಡ ಮೊಣ್ಣಪ್ಪ ಹಾಗೂ ಪ್ರಮುಖರಾದ ಮಂದಪಂಡ ಮನೋಜ್ ಕಟ್ಟೆಮಾಡು ದೇವಾಲಯದಲ್ಲಿ ನಡೆದ ಘಟನೆ ಖಂಡನೀಯವೆಂದರು.
ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿರುವ ಸಂದರ್ಭ ಕೊಡವ ಜನಾಂಗದವರು ಕೊಡವ ಸಾಂಪ್ರದಾಯಿಕ ಉಡುಪು ಕುಪ್ಯಚೇಲೆ, ಪೀಚೆಕತ್ತಿ ತೊಟ್ಟು, ಕೊಡವ ಮಹಿಳೆಯರು ಕೊಡವ ಸೀರೆ ಧರಿಸಿ ದೇವಾಲಯ ಪ್ರವೇಶಿಸುವ ಸಂದರ್ಭ ಕೆಲವರು ತಡೆಯೊಡ್ಡಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.
ಕೊಡವ ಸಮಾಜದ ಆಡಳಿತ ಮಂಡಳಿ ಸದಸ್ಯರು, ಕೊಡವ ಸಮಾಜ ರಿಕ್ರಿಯೇಷನ್ ಮತ್ತು ಸ್ಪೋಟ್ರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಪಟ್ಟಮಾಡ ಕುಶಾಲಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಚರಣಿಯಂಡ ಸುಮನ್, ಬಡ್ಡಿರ ನಂದಕುಮಾರ್, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಮಾಜಿ ಸೈನಿಕರ ಕಲ್ಯಾಣ ಸಂಘದ ಅಧ್ಯಕ್ಷ ಅಯ್ಯಂಡ ಅಯ್ಯಪ್ಪ, ಕುಂಚೆಟ್ಟಿರ ಪೆಮ್ಮಯ್ಯ, ಕೇಕಡ ಪೂವಮ್ಮ ರಮೇಶ್, ಬೊಳ್ಳಾರ್‍ಪಂಡ ಚಂಗಪ್ಪ, ಸಮಾಜದ ಸದಸ್ಯರು, ಕೊಡವಾಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.