ಮಡಿಕೇರಿ | ಎಸೆಸೆಲ್ಸಿ ಬಾಲಕಿಯ ಹತ್ಯೆ ಪ್ರಕರಣ ; ವಿಶೇಷ ನ್ಯಾಯಾಲಯ ತೆರೆಯಲು ಕ್ರಮ : ಜಿ.ಪರಮೇಶ್ವರ್

Update: 2024-05-16 17:34 IST
ಮಡಿಕೇರಿ | ಎಸೆಸೆಲ್ಸಿ ಬಾಲಕಿಯ ಹತ್ಯೆ ಪ್ರಕರಣ ; ವಿಶೇಷ ನ್ಯಾಯಾಲಯ ತೆರೆಯಲು ಕ್ರಮ : ಜಿ.ಪರಮೇಶ್ವರ್
  • whatsapp icon

ಮಡಿಕೇರಿ: ಎಸೆಸೆಲ್ಸಿ ಬಾಲಕಿಯನ್ನು ಹತ್ಯೆ ಮಾಡಿರುವ ಕೃತ್ಯ ಸಹಿಸಲಾಗುವುದಿಲ್ಲ. ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಅಭಿಯೋಜಕರನ್ನು ನೇಮಿಸಿ, ವಿಶೇಷ ನ್ಯಾಯಾಲಯ ತೆರೆಯಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ತಿಳಿಸಿದರು.

ಸೋಮವಾರಪೇಟೆಯ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆ ಗ್ರಾಮದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿನಿ ಹತ್ಯೆಯಾದ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

"ಕೊಲೆಯಾದ ವಿದ್ಯಾರ್ಥಿನಿ ಮೀನಾಗೆ 16 ವರ್ಷ.‌ ಆರೋಪಿ ಪ್ರಕಾಶ್ ಎಂಬುವನಿಗೆ 32 ವರ್ಷ. ಬಾಲಕಿಯ ತಂದೆ ತಾಯಿಯನ್ನು ಒತ್ತಾಯ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿದ ಕೂಡಲೇ ಆ ನಿಶ್ಚಿತಾರ್ಥ ತಡೆದಿದ್ದರು. ವಿದ್ಯಾರ್ಥಿನಿಗೆ 18 ವರ್ಷ ತುಂಬಿದ ನಂತರ ಮದುವೆಯಾಗುವಂತೆ ಬುದ್ಧಿ ಹೇಳಿದ್ದಾರೆ. ಇದಾದ ಬಳಿಕ ಬಾಲಕಿಯ ಮನೆ ಬಳಿ ಹೋಗಿ ಆರೋಪಿ ಆಕೆಯ ತಂದೆ-ತಾಯಿ ಜೊತೆ ಜಗಳ ತೆಗೆದಿದ್ದಾನೆ. ತನ್ನ ಜೊತೆ ಮದುವೆ ಮಾಡಿಕೊಡುವಂತೆ ಒತ್ತಾಯಿಸಿ, ಬಾಲಕಿಯನ್ನು ಎಳೆದೊಯ್ದು ಕೃತ್ಯ ಎಸಗಿದ್ದಾನೆ ಎಂಬುದು ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ " ಎಂದು ಹೇಳಿದರು.

"ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕೆನ್ನುವ ನಿಟ್ಟಿನಲ್ಲಿ ಪೊಲೀಸರು ಕೆಲಸ‌ ಮಾಡುತ್ತಿದ್ದಾರೆ. ಬಾಲಕಿಯನ್ನು ಮತ್ತೆ ವಾಪಸ್ ಕರೆದುಕೊಂಡು ಬರಲು ಆಗುವುದಿಲ್ಲ.‌ ಆದರೆ, ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಅಭಿಯೋಜಕರನ್ನು ನೇಮಿಸಲಾಗುವುದು. ಸ್ಪೆಷಲ್ ಕೋರ್ಟ್ ತೆರೆಯಲಾಗುವುದು" ಎಂದು ತಿಳಿಸಿದರು.

"ಕುಟುಂಬವನ್ನು ನೋಡಿದರೆ ಬಹಳ ನೋವಾಗುತ್ತದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪರಿಹಾರದ ಬಗ್ಗೆ ಮಾತನಾಡಲು ಆಗುವುದಿಲ್ಲ. ನೀತಿ ಸಂಹಿತೆ ಮುಗಿದ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಲಿದೆ" ಎಂದು ಹೇಳಿದರು.

ಈ ವೇಳೆ ಶಾಸಕ ಡಾ.ಮಂಥರ್ ಗೌಡ, ಐಜಿಪಿ ಅಮಿತ್ ಸಿಂಗ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News