ಬಂಗಾರಪೇಟೆ ಅಪಘಾತ ಪ್ರಕರಣ: ಮೃತರ ಸಂಖ್ಯೆ 5ಕ್ಕೆ ಏರಿಕೆ; ಗಾಯಾಳು ಗರ್ಭಿಣಿ ಮೃತ್ಯು
Update: 2025-03-05 11:39 IST

ಕೋಲಾರ: ಬಂಗಾರಪೇಟೆ ತಾಲೂಕಿನ ಕುಪ್ಪನಹಳ್ಳಿ ಬಳಿಯ ನೂತನ ಚೆನ್ನೈ- ಬೆಂಗಳೂರು ಕಾರಿಡಾರ್ ಹೆದ್ದಾರಿಯಲ್ಲಿ ರವಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತೋಷ್ ಎಂಬವರ ಪತ್ನಿ ಸುಶ್ಮಿತಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಸುಶ್ಮಿತಾ ತುಂಬು ಗರ್ಭಿಣಿಯಾಗಿದ್ದರು. ಅಪಘಾತದ ತೀವ್ರತೆಗೆ ಸುಶ್ಮಿತಾರ ಹೊಟ್ಟೆಯಲ್ಲಿದ್ದ ಮಗು ಸ್ಥಳದಲ್ಲೇ ಮೃತಪಟ್ಟಿತ್ತು.
ಬೈಕ್ ಮತ್ತು ಕಾರು ಮಧ್ಯೆ ರವಿವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಮಾಲಕ ಸಂತೋಷ್ ಅವರ ಪುತ್ರಿ ಉದ್ವಿತಾ (3), ತಾಯಿ ರತ್ನಮ್ಮ (60), ಮಾವ ಮಹೇಶ್(55) ಹಾಗೂ ಬೈಕ್ ಸವಾರ ಬಂಗಾರಪೇಟೆ ತಾಲೂಕಿನ ದೊಡ್ಡೂರು ಗ್ರಾಮದ ಶ್ರೀನಾಥ್ ಎಂಬವರು ಮೃತಪಟ್ಟಿದ್ದರು.