ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಜನಪರ ಉತ್ಸವ ಆಯೋಜನೆ : ಸಚಿವ ಬಿ.ಎಸ್.ಸುರೇಶ್

ಕೋಲಾರ : ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಸರ್ಕಾರ ಜನಪರ ಉತ್ಸವದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ, ʼರಾಜ್ಯ ಮಟ್ಟದ ಜನಪರ ಉತ್ಸವ ಕಾರ್ಯಕ್ರಮʼವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು .
ಜಾನಪದ ಕಲೆಯು ಗ್ರಾಮೀಣ ಭಾಗದ ಬಡವರ, ಹಿಂದುಳಿದವರ ಹಾಗೂ ದಲಿತರಲ್ಲಿ ಉಳಿದಿದೆ. ಹಾಗಾಗಿ ಈ ಕಲೆಯನ್ನು ತಮ್ಮ ಯುವ ಪೀಳಿಗೆಗೆ ಮುಂದುವರಿಸಿಕೊಂಡು ಹೋಗಲು, ಅವರಿಗೂ ಕಲಿಸಬೇಕು. ಇಂದಿನ ಕಲೆಗಳಲ್ಲಿ ಯಾವುದೇ ಸಂಸ್ಕೃತಿ ಉಳಿದಿಲ್ಲ. ಹಿಂದೆ ನಮ್ಮ ಹಿರಿಯರು ನಮಗೆ ಹಲವಾರು ಜಾನಪದ ಹಾಡುಗಳನ್ನು ಕಲಿಸುತ್ತಿದ್ದರು. ಹಳ್ಳಿಗಳಲ್ಲಿ ನಾಟಕ, ಕೋಲಾಟ, ಭಜನೆ ಪದಗಳನ್ನು ಕುಳಿತು ಕೇಳಬಹುದಾಗಿತ್ತು. ಈಗ ಇಂತಹ ಕಲೆಗಳು ನಶಿಸುತ್ತಿದ್ದು, ಕಲವಿದರಾದ ತಾವು ಇವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಸಚಿವ ಬೈರತಿ ಸುರೇಶ್ ಕರೆ ನೀಡಿದರು.
ಕರ್ನಾಟಕ ಸರ್ಕಾರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಸಮಾಜದಲ್ಲಿರುವ ಎಲ್ಲರೂ ಸಮಾನರು ಎಂಬ ಸಮಸಾಮಾಜ ನಿರ್ಮಾಣದ ದೃಷ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದಲೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ಪಡೆದುಕೊಂಡು ಕೆಳ ಮಟ್ಟದ ಸಮುದಾಯಗಳು ಮುನ್ನಡೆಯುತ್ತಿದೆ. ಮಹಿಳಾ ಶಕ್ತಿಯೇ ದೇಶದ ಶಕ್ತಿ ಅದನ್ನು ಅಂಬೇಡ್ಕರ್ ಅವರು ತಮ್ಮ ಸಂವಿಧಾನದಲ್ಲಿ ಬರೆದು ಕೊಡುಗೆಯಾಗಿ ನೀಡಿದ್ದಾರೆ. ನಾವು ದೇವರನ್ನು ಕಾಣದೆ ಇರಬಹುದು, ಆದರೆ ನಮಗೆ ಕಾಣದೆ ಇರುವ ದೇವರು ಅಂಬೇಡ್ಕರ್ ಅದನ್ನು ನಾವು ಕೇವಲ ಬಾಯಿಂದ ಹೇಳುವುದಲ್ಲ. ತಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಅವರ ಚಿಂತನೆಗಳನ್ನು ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ರಾಜ್ಯದಲ್ಲಿ ಇರುವಂತಹ ವಿದ್ಯವಂತರಿಂದ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೆಲ ಸಮುದಾಯಗಳ ಜನಪದ ಕಲೆಗಳು ಪ್ರದರ್ಶನಗಳನ್ನು ಮಾಡುವ ನಿಟ್ಟಿನಲ್ಲಿ ಪ್ರೋತ್ಸಾಹ ಕೊಡುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಕಾರ್ಯಕ್ರಮವನ್ನು ರೂಪಿಸಿರುವುದು ಸಂತಸದ ಸಂಗತಿ ಎಂದರು.
ಕೋಲಾರದಲ್ಲಿ ರಾಜ್ಯ ಮಟ್ಟದ ಜನಪರ ಉತ್ಸವ ಕಾರ್ಯಕ್ರಮಕ್ಕೆ ಸರ್ಕಾರದಿಂದ ಸುಮಾರು 93 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಪರಿಶಿಷ್ಟ ಜಾತಿ ವಿಶೇಷ ಘಟಕ ಅಡಿಯಲ್ಲಿ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಪರಿಶಿಷ್ಟ ಜಾತಿಯವರಿಗೆ ಜನಪದ ಕಲೆಗಳು ತಮ್ಮ ರಕ್ತದಲ್ಲಿಯೇ ಇರುತ್ತದೆ. ಅವರು ವಂಶ ಪಾರಂಪರ್ಯವಾಗಿ ಜನಪದ ನಾಟಕ, ಹಾಡುಗಾರಿಕೆ, ಸಂಗೀತ, ನೃತ್ಯ, ಮಾಡಿಕೊಂಡು ಬಂದಿರುತ್ತಾರೆ. ಅವರನ್ನು ಪ್ರೋತ್ಸಾಹಿಸಿ ಆ ಕಲೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಕೋಲಾರದಲ್ಲಿ ಹಮ್ಮಿಕೊಂಡಿರುವುದಾಗಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಮಾತನಾಡಿ, ನಮ್ಮ ಕರ್ನಾಟಕದ ಇತಿಹಾಸದಲ್ಲಿಯೇ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಕಾರ್ಯಕ್ರಮವನ್ನು ಯಾರು ಮಾಡಿರಲಿಲ್ಲ. ಯಾಕೆಂದರೆ ನಮ್ಮ ರಾಜ್ಯದಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಕಾನೂನು ಜಾರಿಗೆ ತಂದು ಪ್ರತಿಯೊಂದು ಇಲಾಖೆಗಳಿಂದಲೂ ಸಮುದಾಯದ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ದೇಶದಲ್ಲಿಯೇ ಇಂತಹ ಕಾರ್ಯಕ್ರಮವನ್ನು ಮೊದಲು ಜಾರಿಗೆ ತಂದಿದ್ದು ನಮ್ಮ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು. ರಾಜ್ಯದ ಬಜೆಟ್ ನಲ್ಲಿ ಶೇ.24.1ರಷ್ಟು ಅನುದಾನವನ್ನು ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಗಳಿಗೆ ಮೀಸಲಿಟ್ಟಿದ್ದಾರೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲಾವಿದರಿಗೆ ಕಾರ್ಯಕ್ರಮಗಳನ್ನು ನೀಡಿ ವಿಶೇಷವಾಗಿ ಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯ ಮಟ್ಟದ ಜನಪರ ಉತ್ಸವ ಕಾರ್ಯಕ್ರಮವನ್ನು ಕೋಲಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದೇವೆ. ಇವತ್ತಿನ ಈ ಕಾರ್ಯಕ್ರಮವನ್ನು ಮಾಡಲು ನಾವು ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಮತ್ತು ಎಸ್.ಸಿ.ಪಿ/ಟಿ.ಎಸ್.ಪಿ. ಯೋಜನೆಯನ್ನು ಜಾರಿಗೆ ತಂದಂತಹ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾವು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಜನಪದ ಕಲೆಗಳನ್ನು ಮರೆಯುವ ಕೆಲಸ ಆಗುತ್ತಿದೆ ರಾಜ್ಯದ ಮೂಲೆ ಮೂಲೆಗಳಲ್ಲಿ ಅಡಗಿರುವ ಜನಪದ ಕಲೆಗಳು ಎಲ್ಲಾ ಕಡೆಗಳಲ್ಲೂ ತಿಳಿಯುವ ಕೆಲಸವಾಗಬೇಕು ಆದ್ದರಿಂದಲೇ ನಾವು ಪರಿಶಿಷ್ಟ ಜಾತಿ ಯೋಜನೆಯಡಿಯಲ್ಲಿ ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನೆಯಡಿಯಲ್ಲಿ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವಾಗಿ ತಿಳಿಸಿದರು.
ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯಕ್ರಮ ಇದಾಗಿರುವುದರಿಂದ ತಮ್ಮ ಕಲೆಗಳನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಇದೇ ಮಾನ್ಯ ಮುಖ್ಯಮಂತ್ರಿಗಳ ಆಶಯವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ.ಧರಣಿ ದೇವಿ ಮಾಲಗತ್ತಿ ಪ್ರಸ್ತಾವಿಕ ಭಾಷಣವನ್ನು ಮಾಡಿ, ಕೋಲಾರ ಜಿಲ್ಲೆಯು ಕೆರೆಗಳ ಊರು ,ಕೃಷಿಯಲ್ಲಿ ಕ್ರಾಂತಿ ಮಾಡಿದ ಊರು, ವಿಶೇಷವಾಗಿ ದಲಿತ ಚಳುವಳಿಗಳ ತವರೂರು ಮತ್ತು ಜನಪದ ನಿಲುವಿಗೆ ಕೋಲಾರ ಜಿಲ್ಲೆ ಬಲವಾಗಿದೆ ಎಂದರು.
ಇದಕ್ಕೂ ಮುನ್ನ ರಾಜ್ಯ ಮಟ್ಟದ ಜನಪರ ಉತ್ಸವ ಕಾರ್ಯಕ್ರಮಕ್ಕೆ ನಗರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಕೋಲಾರದ ಶಾಸಕರಾದ ಡಾ.ಕೊತ್ತೂರು ಜಿ.ಮಂಜುನಾಥ್ ಅವರು ಮಾಲಾರ್ಪಣೆ ಮಾಡುವ ಮೂಲಕ ಕಲಾತಂಡಗಳ ಮೆರವಣಿಗೆ ಕಾರ್ಯಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಕೋಲಾರ ಲೋಕಸಭಾ ಸಂಸದ ಎಂ.ಮಲ್ಲೇಶ್ ಬಾಬು, ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯರುಗಳಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ನಗರಸಭಾ ಅಧ್ಯಕ್ಷೆ ಕೆ.ಲಕ್ಷ್ಮೀದೇವಮ್ಮ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಚಲವಾದಿ, ಲೋಕಸೇವಾ ಆಯೋಗದ ಸದಸ್ಯೆ ಕಾವಲಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ.ಬಾಗೇವಾಡಿ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ. ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಮುಖವೇಣಿ ಅಂಜಿನಪ್ಪ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷರಾದ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಜಯಲಕ್ಷ್ಮಿ, ಸೇರಿದಂತೆ ಪ್ರಮುಖ ದಲಿತ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಕಲಾವಿದರು ಇದ್ದರು.