ಸಮಾನತೆಯ ಸಂದೇಶಕ್ಕಾಗಿ ಸೈಕ್ಲಿಂಗ್ ಮಾಡಿ ವಿಶ್ವ ದಾಖಲೆ ಬರೆದ ಕೋಲಾರದ ಬಿ.ಎಂ.ಶ್ರೀನಿವಾಸ್

ಕೋಲಾರ, ಮಾರ್ಚ್.17 : "ಸಮಾನತೆಯ ಸಂದೇಶದೊಂದಿಗೆ ವಿಶ್ವ ದಾಖಲೆ" ಎಂಬ ಘೋಷಣೆಯಡಿ ಚಿನ್ನದ ನಾಡು ಕೋಲಾರದಿಂದ ಸಾಂಸ್ಕೃತಿಕ ನಗರಿ ಮೈಸೂರಿನವರೆಗೆ 12 ಗಂಟೆಗಳ ಸಮಯ ಅತೀವೇಗದಲ್ಲಿ ಸೈಕ್ಲಿಂಗ್ ಮಾಡಿ ವಿಶ್ವ ದಾಖಲೆ ಬರೆದ ಮಾಸ್ಟರ್ ಕ್ರೀಡಾಪಟು ಕೋಲಾರದ ಬಿ.ಎಂ.ಶ್ರೀನಿವಾಸ್ ಅವರನ್ನು ದಸಂಸ ಪದಾಧಿಕಾರಿಗಳು ಮೈಸೂರಿಗೆ ಬರಮಾಡಿಕೊಂಡು ಅಭಿನಂದಿಸಿದರು.
ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಸಹಯೋಗದಲ್ಲಿ ಸತತ 12 ತಾಸುಗಳ ಸೈಕ್ಲಿಂಗ್ ಮಾಡಿ ವಿಶ್ವ ದಾಖಲೆ ಬರೆದಿದ್ದಾರೆ. ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಮಾರ್ಚ್ 14ರ ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ .ಬಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ ರವರು ಹಸಿರು ಬಾವುಟ ಹಾರಿಸುವ ಮೂಲಕ ಸೈಕ್ಲಿಂಗ್ ಗೆ ಚಾಲನೆ ನೀಡಿದರು.

ಮಾರನೇ ದಿನ ಮಾರ್ಚ್ 15ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಟೌನ್ ಹಾಲ್ ತಲುಪಿ ವಿಶ್ವ ದಾಖಲೆ ಬರೆದ ಶ್ರೀನಿವಾಸ್ ಅವರನ್ನು ಮೈಸೂರಿನ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದಿಸಿದರು. ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಅವರೂ ಶ್ರೀನಿವಾಸ್ ಅವರನ್ನು ಮೈಸೂರಿನ ತಮ್ಮ ಮನೆಗೆ ಬರಮಾಡಿಕೊಂಡು ಅವರ ಸಾಧನೆಯನ್ನು ಶ್ಲಾಘಿಸಿದರು.

ಇಲ್ಲಿಯ ತನಕ ಸುಮಾರು 10 ಸಾವಿರ ಕಿ.ಮೀ.ಗೂ ಹೆಚ್ಚು ಸೈಕ್ಲಿಂಗ್ ಮಾಡಿರುವ ಶ್ರೀನಿವಾಸ್ ಕೋಲಾರದ ನೆಲ ಜಲ ಸಂಪನ್ಮೂಲ ರಕ್ಷಣೆಗಾಗಿ ಹಾಗೂ ಶಾಶ್ವತ ನೀರಾವರಿಗಾಗಿ ಸೈಕಲ್ ತುಳಿದಿದ್ದಾರೆ. ಚೈತ್ಯ ಭೂಮಿ ನಾಗಪುರಕ್ಕೆ ಸೈಕಲ್ ತುಳಿದ ಇವರು ಜಿಲ್ಲೆಗೆ ನೀರಾವರಿ ಯೋಜನೆ ರೂಪಿಸಬೇಕು ಎಂದು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನವಿ ಮಾಡಿದ್ದಾರೆ. ಇದೀಗ ಸಮಾನತೆಯ ಸಂದೇಶಕ್ಕಾಗಿ ವಿಶ್ವ ದಾಖಲೆ ಸೈಕ್ಲಿಂಗ್ ಮಾಡಿ ಗುರಿ ಮುಟ್ಟಿದ್ದಾರೆ.
ಈ ಸಂದರ್ಭದಲ್ಲಿ ಜಿ.ಡಬ್ಲೂ.ಆರ್ ಸಂಸ್ಥೆಯ ಮುಖ್ಯಸ್ಥೆ ಪೂಜಾ, ಸೈಕ್ಲಿಂಗ್ ಸಹಾಯಕರಾದ ಸುಹಾಸ್, ಸುಜೀತ್, ಮುಖಂಡರಾದ ಮುರುಡಗಳ್ಳಿ ಮಂಜು, ನಿಂಗರಾಜು ಬೇರಂಬಾಡಿ, ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್, ಸಂ.ಸಂಚಾಲಕರಾದ ಶಂಭುಲಿಂಗ ಸ್ವಾಮಿ,ಹೆಗ್ಗನೂರುನಿಂಗರಾಜು,ಬಿ.ಡಿ.ಶಿವಬುದ್ದಿ, ಯಾಚೇನಹಳ್ಳಿ ಸೋಮಶೇಖರ್,ಕುಕ್ಕೂರುರಾಜು,ರಜನಿ, ನಾಗರಾಜ್ ಮೂರ್ತಿ, ಉಮೇಶ್, ಅತ್ತಿಕುಪ್ಪೆರಾಮಕೃಷ್ಣ, ರಾಜು ಚಿಕ್ಕ ಹುಣಸೂರು, ಮೈಲಾರ ಮಹೇಶ್, ದಾಸಯ್ಯ, ಕಲ್ಲಹಳ್ಳಿ ಕುಮಾರ್,ಕುಪ್ಪೇಗಾಲಸೋಮಣ್ಣ, ಅಪ್ಸರ್, ರಾಜಣ್ಣ ಇತರರು ಉಪಸ್ಥಿತರಿದ್ದರು.

1982ರಿಂದ ಸುಮಾರು 43 ವರ್ಷಗಳ ಸುದೀರ್ಘ ಕಾಲ ಸುಸ್ಥಿರ ಆರೋಗ್ಯದ ಬಗ್ಗೆ ತಿಳಿ ಸಮುದಾಯಗಳ ಯುವ ಸಮೂಹಕ್ಕೆ ಸ್ಪೂರ್ತಿ ನೀಡಲೆಂದು ನಿರಂತರವಾಗಿ ಕ್ರೀಡೆ ಮತ್ತು ವ್ಯಾಯಾಮ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇನೆ. ಪ್ರತಿಯೊಬ್ಬರೂ ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಮಾಡುವುದರಿಂದ ಸುಸ್ಥಿರ ಆರೋಗ್ಯ ಹೊಂದಲು ಸಾಧ್ಯ. ನನ್ನ ಪ್ರಯತ್ನಕ್ಕೆ ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರ ಹಾಗೂ ಅಪಾರ ಸಂಖ್ಯೆಯ ಕೋಲಾರದ ಬಂಧುಗಳು ಬೆನ್ನು ತಟ್ಟಿದ್ದಾರೆ. ದೇಶದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿ ಇಂದು ಶಾಂತಿ ಸೌಹಾರ್ದತೆ ಕಾಪಾಡಲು ಸಮಾನತೆಯ ಸಂದೇಶಕ್ಕಾಗಿ ಸೈಕ್ಲಿಂಗ್ ಮಾಡಿದ್ದೇನೆ. ಇದು ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಆಗಿದೆ.
-- ಬಿ.ಎಂ. ಶ್ರೀನಿವಾಸ್, ಮಾಸ್ಟರ್ ಅಥ್ಲೀಟ್, ಕೋಲಾರ