ಕೊಪ್ಪಳ | ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ಕನ್ನಡಿಗ ಪ್ರಯಾಣಿಕನ ಮೇಲೆ ಟಿ.ಸಿ.ಯಿಂದ ಹಲ್ಲೆ: ಆರೋಪ

ಕೊಪ್ಪಳ : ಕನ್ನಡದಲ್ಲಿ ಮಾತನಾಡಿ ಎಂದು ಪ್ರಯಾಣಿಕ ಹೇಳಿದ್ದಕ್ಕೆ ರೈಲಿನ ಟಿ.ಸಿ.ಯೊಬ್ಬರು (ಟಿಕೆಟ್ ಕಲೆಕ್ಟರ್) ಪ್ರಯಾಣಿಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹಂಪಿ ಎಕ್ಸಪ್ರೆಸ್ ಮೈಸೂರಿನಿಂದ ಕೊಪ್ಪಳ ಬರುವ ರೈಲಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರೈಲಿನಲ್ಲಿ ಮುಹಮ್ಮದ್ ಬಾಷಾ ಅತ್ತಾರ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆ ಮಾಡಿದ ಟಿ.ಸಿ. ಯಾರು ಎಂದು ತಿಳಿದುಬಂದಿಲ್ಲ.
ಈ ಕುರಿತು ಕೊಪ್ಪಳ ರೈಲ್ವೇ ನಿಲ್ದಾಣದ ಸ್ಟೇಷನ್ ಮಾಸ್ಟರ್‌ಗೆ ದೂರು ನೀಡಲಾಗಿದೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಮುಹಮ್ಮದ್ ಬಾಷಾ ಅವರು ತಿಳಿಸಿದಾರೆ.
ಈ ಕುರಿತು ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, "ನಾನು ಮೈಸೂರಿನಿಂದ ಕೊಪ್ಪಳಕ್ಕೆ ಬರುತಿದ್ದೆ. ಆ ಸಮಯದಲ್ಲಿ ಟಿ.ಸಿ.ಯವರು ಎಲ್ಲರ ಟಿಕೆಟ್ ಪರಿಶೀಲಿಸುತ್ತಾ ಬರುತಿದ್ದರು. ಅವರು ಹಿಂದಿಯಲ್ಲಿ ಮಾತನಾಡುತಿದ್ದರು. ನನ್ನ ಬಳಿ ಒಂದಾಗ ನಾನು ಅವರನ್ನು ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದೆ. ಅಷ್ಟಕ್ಕೆ ಅವರು ಕೋಪಗೊಂಡು ನನಗೆ ಹೊಡೆದರು, ಅಲ್ಲಿದ್ದ ಮಹಿಳೆಯರು ಕೂಡ ಕನ್ನಡದಲ್ಲಿ ಮಾತನಾಡಿ ಹೇಳಿದರೂಅವರು ಕೇಳಲಿಲ್ಲ. ಅವರು ನನಗೆ ಹೊಡೆದು ಮೊಬೈಲ್ ಫೋನ್ ಕಸಿದು ಕೆಳಗೆ ಹಾಕಿದರು" ಎಂದು ಆರೋಪಿಸಿದರು.
ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯು ಕೊಪ್ಪಳ ರೈಲ್ವೇ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಸ್ಟೇಷನ್ ಮಾಸ್ಟರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಗಿರೀಶಾನಂದ ಅವರು, ಕೊಪ್ಪಳದ ಭಾಗ್ಯನಗರ ನಿವಾಸಿಯಾದ ಕನ್ನಡಿಗ ಬಾಷಾ ಅತ್ತಾರ ಅವರು ಹಂಪಿ ಎಕ್ಸಪ್ರೆಸ್ ರೈಲಿನಲ್ಲಿ ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಟಿಕೆಟ್ ಕಲೆಕ್ಟರ್ ವೊಬ್ಬರು ಹಿಂದಿ ಬಾಷೆಯಲ್ಲಿ ಮಾತನಾಡುವಾಗ ಕನ್ನಡದಲ್ಲಿ ಮಾತನಾಡಿ ಎಂದು ಮನವಿ ಮಾಡಿದಕ್ಕೆ ಅವರ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ದೌಜನ್ಯವೆಸಗಿದ್ದಾರೆ. ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌಜನ್ಯವೆಸಗಿದ ಟಿಕೆಟ್ ಕಲೆಕ್ಟರ್ ಮೇಲೆ ಸೂಕ್ತ ಕ್ರಮಕೈಗೊಂಡು ಕರ್ತದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.