ಕೊಪ್ಪಳ | ಶ್ರೀ ಕೃಷ್ಣದೇವರಾಯ ಸಮಾಧಿ ಮಂಟಪದಲ್ಲಿ ಮಾಂಸ ಶುದ್ಧೀಕರಣ : ಮೂವರ ವಿರುದ್ಧ ಪ್ರಕರಣ ದಾಖಲು

ಕೊಪ್ಪಳ : ಆನೆಗೊಂದಿ ಬಳಿ ಇರುವ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಶ್ರೀ ಕೃಷ್ಣದೇವರಾಯರ ಸಮಾಧಿ ಮಂಟಪದಲ್ಲಿ ಕುರಿ ಮಾಂಸ ಶುದ್ಧೀಕರಣ ಮಾಡಿದ ಘಟನೆಯ ವೀಡಿಯೊ ವೈರಲ್ ಆಗಿದ್ದು, ಮೂವರ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಆರೋಪಿಗಳನ್ನು ಆನೆಗುಂದಿ ಗ್ರಾಮದ ಹನುಮಂತ, ಫಕೀರಪ್ಪ, ಹುಲಗಪ್ಪ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶ್ರೀ ಕೃಷ್ಣದೇವರಾಯ ಸಮಾಧಿ ಮಂಟಪಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಭೇಟಿ ನೀಡಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾಧಿ ಮಂಟಪದಲ್ಲಿ ಅಚಾತುರ್ಯ ಆಗಿದೆ ಎಂದು ಇಲ್ಲಿಗೆ ಬಂದಿದ್ದೇನೆ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಮನವಿ ಮಾಡಿದರು.
ಶ್ರೀಕೃಷ್ಣದೇವರಾಯ ವಿಜಯನಗರವನ್ನು ಆಳಿದ ದೊರೆಗಳಲ್ಲಿ ಅತ್ಯಂತ ಪ್ರಸಿದ್ಧ ದೊರೆಯಾಗಿದ್ದು, 64 ವಿದ್ಯೆಗಳಲ್ಲಿ ಪರಿಣಿತಿ ಹೊಂದಿದ್ದರು. ಅದೇ ಕಾರಣಕ್ಕೆ ಶ್ರೀಕೃಷ್ಣದೇವರಾಯ ಸಮಾಧಿಯನ್ನು 64 ಕಂಬಗಳಿಂದ ಕೂಡಿದ ಒಂದು ವಿಶಿಷ್ಟ ಮಂಟಪದಲ್ಲಿ ನಿರ್ಮಿಸಲಾಗಿತ್ತು. ಸಮಾಧಿಯ ಮೇಲೆ ಮಾಂಸ ಶುದ್ಧೀಕರಣ ಮಾಡಿದ ಘಟನೆಯ ಬಗ್ಗೆ ಸ್ಥಳಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.