ಪ್ರಧಾನಿ ಮೋದಿ ಯುವಜನರಿಗೆ ಉದ್ಯೋಗ ಕೊಡುವ ಯೋಚನೆಯನ್ನೇ ಹೊಂದಿಲ್ಲ : ನಟ ಪ್ರಕಾಶ್ ರೈ

Update: 2024-04-29 16:25 GMT

ಗಂಗಾವತಿ: ಪ್ರಧಾನಿ ಮೋದಿ ಯುವಜನರಿಗೆ ಉದ್ಯೋಗ ಕೊಡುವ ಯೋಚನೆಯನ್ನೇ ಹೊಂದಿಲ್ಲ. ಅವರು ಕಲ್ಯಾಣ ಕರ್ನಾಟಕವನ್ನು ಕಾವಿ ಕಲ್ಯಾಣ ಮಾಡಲು ಹೊರಟಿದ್ದಾರೆ ಎಂದು ಚಿತ್ರನಟ ಪ್ರಕಾಶ್ ರೈ ಟೀಕಿಸಿದ್ದಾರೆ.

ರವಿವಾರ ಗಂಗಾವತಿಯಲ್ಲಿ ನಡೆದ ದೇಶ ಪ್ರೇಮಿ ಯುವಜನರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಆಸೆ, ಆಶಯ, ಕನಸು ಕಾಯಕದ ಕಲ್ಯಾಣ. ಈ ಮಹಾಪ್ರಭುಗಳು ಯುವಜನರಿಗೆ ಉದ್ಯೋಗ ನೀಡದೇ ಕಲ್ಯಾಣ ಕರ್ನಾಟಕವನ್ನು ಕಾವಿ ಕಲ್ಯಾಣ ಮಾಡಲು ಹೊರಟಿದ್ದಾರೆ. ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂದು ಹೇಳುವ ಮೋದಿಗೆ ಎರಡು ನಾಲಿಗೆ ಇದೆ. ಹೊರಗಿನ ನಾಲಿಗೆ ಪಕೋಡ ಮಾರಿ ಎಂದು ಹೇಳಿದರೆ, ಒಳಗಿನ ನಾಲಿಗೆಯ ಕುತಂತ್ರವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಮೋದಿ ನೂರು ಸ್ಮಾರ್ಟ್‍ಸಿಟಿ ಮಾಡುತ್ತೇನೆ ಅಂತ ಹೇಳಿದ್ದರು. ಅದರಿಂದ ಹೊಸ ಶಾಲೆ, ಕಾಲೇಜು, ಆಸ್ಪತ್ರೆ, ರಸ್ತೆ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳು ಬರುತ್ತವೆ. ಈ ಅಭಿವೃದ್ದಿಯಿಂದ ನಮಗೆ ಉದ್ಯೋಗ ಸಿಗುತ್ತದೆ ಎಂದು ನಂಬಿದ್ದೇವು. ಇವರು 10 ವರ್ಷಗಳಾದರೂ ಹತ್ತು ಸ್ಮಾರ್ಟ್‍ಸಿಟಿ ಮಾಡಲಿಲ್ಲ. ಎಲ್ಲರಿಗೂ ಆಸೆ ಹುಟ್ಟಿಸಿ, ಮೋದಿ ಮಂದಿರ ಕಟ್ಟುವುದಕ್ಕೆ ಹೋದರು. ಇವರಿಗೆ ಉದ್ಯೋಗ ಕೊಡುವ ಯಾವುದೇ ರೀತಿಯ ಆಲೋಚನೆಗಳು ಇವರಿಗೆ ಇಲ್ಲ ಎಂದು ಪ್ರಕಾಶ್ ರೈ ಆಕ್ರೋಶ ವ್ಯಕ್ತ ಪಡಿಸಿದರು.

ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಮಾತನಾಡುವುದಲ್ಲ. ರೈತರಿಗೆ ಬೇಕಾಗಿರುವುದು ಘನತೆ, ಗೌರವ. ಇಂದು ರೈತನ ಮಗ ಯಾಕೆ ರೈತ ಆಗುತ್ತಿಲ್ಲ ಎಂದರೆ, ಅವನಿಗೆ ಗೌರವ, ಘನತೆ ಸಿಗುತ್ತಿಲ್ಲ, ಪರ್ಯಾಯ ಉದ್ಯೋಗ ಇಲ್ಲ. ಇವರು ಉದ್ದೇಶ ಪೂರ್ವಕಾಗಿಯೇ ರೈತರ ಸಾಲಮನ್ನಾ ಮಾಡುವುದಿಲ್ಲ. ಉಚಿತ ಆಹಾರ ಧಾನ್ಯ ಕೊಡುವುದಿಲ್ಲ. ರೈತರನ್ನು ಸಶಕ್ತರನ್ನಾಗಿ ಮಾಡಿದರೆ, ಅವರ ಮಕ್ಕಳು ಓದಿಕೊಳ್ಳುತ್ತಾರೆ ನಂತರ ನಮ್ಮನ್ನು ಪ್ರಶ್ನೆ ಮಾಡುತ್ತಾರೆ ಎನ್ನುವ ಭಯ ಆತಂಕ ಅವರಲ್ಲಿದೆ ಎಂದು ಹೇಳಿದರು.

ಪುಲ್ವಾಮ ಘಟನೆ ದಾಳಿಯ ಬಗ್ಗೆ ಮೋದಿ ಮಾತನಾಡುವುದಿಲ್ಲ. ನಲವತ್ತು ಯೋಧರ ಶವ ಪೆಟ್ಟಿಗೆಗಳು ಹೊತ್ತು ಬರುತ್ತಿರುವ ಸಮಯದಲ್ಲಿ, ಪುಲ್ವಾಮ ಸೈನಿಕರು ರಸ್ತೆಯಲ್ಲಿ ಬರುವುದಕ್ಕೆ ಆಗುವುದಿಲ್ಲ ಹೆಲಿಕಾಪ್ಟರ್ ಕಳುಹಿಸಿ ಎಂದು ಕೇಳಿದರೆ, ಮೋದಿ ಬೇಡ ಎಂದು ಹೇಳಿದರಂತೆ. ಯೋಧರಿಗೆ ಹೆಲಿಕಾಪ್ಟರ್ ಕಳಿಸುವುದು ಬೇಡ ಎಂದು ಹೇಳಿದ ಮಹಾಪ್ರಭು, ಪಾರ್ಲಿಮೆಂಟ್‍ನಲ್ಲಿ ಸೆಂಘೊಲ್ ತರುವುದಕ್ಕೆ ಮಠಾಧೀಶರಿಗೆ ವಿಮಾನವನ್ನು ಕಳುಹಿಸುತ್ತಾರೆ. ಮೋದಿಗೆ ರೈತರಾಗಲಿ, ಯೋಧರಾಗಲಿ, ಬೇಕಾಗಿಲ್ಲ ಎಂದು ಪ್ರಕಾಶ್ ರೈ ನುಡಿದರು.

ದೇಶಕ್ಕೆ ಅನ್ನ ಕೊಡುವುದು ರೈತ, ದೇಶವನ್ನು ಕಾಯುವನು ರೈತನ ಮಗ ಸೈನಿಕ. ಇವರಿಬ್ಬರನ್ನು ಹೀಗೆ ಇರಬೇಕು ಎಂದು ಇಟ್ಟಿದ್ದಾನೆ. ಸರ್ವಾಧಿಕಾರಿ ಫ್ಯಾಸಿಸ್ಟ್ ಗಳಿಗೆ ದೇಶ ಅತಂತ್ರವಾಗಿದ್ದರೇನೆ ಸುಖ. ಮೂರು ಹೊತ್ತು ಊಟ ಹಾಕಿದರೆ, ಎಲ್ಲಿ ಪ್ರಶ್ನೆ ಕೇಳಿಬಿಡುತ್ತಾರೋ ಎನ್ನುವ ಭಯ. ಆದ್ದರಿಂದಲೇ ಒಂದು ಹೊತ್ತಿಗೂ ಊಟ ಇಲ್ಲದೆ ಇರುವಂತಹ ಪರಿಸ್ಥಿತಿಗೆ ತೆಗೆದುಕೊಂಡು ಬಂದು, ಒಂದು ಗುಟುಕು ನೀರು ಕೊಟ್ಟರೆ ಸಾಕು ಇವನು ಮಹಾ ಸಂತ ಎನ್ನುವ ಪರಿಸ್ಥಿತಿಗೆ ತೆಗೆದುಕೊಂಡು ಬರುವುದೇ ಇವರ ಆಳ್ವಿಕೆಯ ಉದ್ದೇಶ ಎಂದು ಅವರು ತಿಳಿಸಿದರು.

3ಸಾವಿರ ಕೋಟಿ ರೂ. ಖರ್ಚು ಮಾಡಿ ಪಟೇಲರ ಶಿಲೆ ಮಾಡಿಸಿ, ಅದರ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡ ಮೋದಿ ಅದನ್ನು ಆರ್ಡರ್ ಕೊಟ್ಟಿದ್ದು ಚೈನಾದವರಿಗೆ, ಭಾರತಿಯರಿಗಲ್ಲ. ಇವರಿಗೆ ಮೇಕ್ ಇನ್ ಇಂಡಿಯಾ ಬೇಕಾಗಿಲ್ಲ. ಮೇಕ್ ಇನ್ ಇಂಡಿಯಾ ಮಾಡುವರಿಗೆ ಬದುಕುವುದಕ್ಕೆ ಬಿಡುವುದಿಲ್ಲ. ಯುವಜನರು ಈಗ ನಮ್ಮ ಉದ್ಯೋಗ ಏನಾಯ್ತು? ರೈತರರು ಏನಾದರೂ? ಶಿಕ್ಷಣದಲ್ಲಿ ಸಮಾನತೆ ಯಾಕೆ ಇಲ್ಲ? ನಮ್ಮ ದವಾಖಾನೆಗಳು ಏನಾಗಿವೆ? ಉಚಿತ ಆರೋಗ್ಯ ಯಾಕೆ ಸಿಗುತ್ತಿಲ್ಲ? ಎಂದು ಪ್ರಶ್ನಿಸಬೇಕು ಎಂದು ಪ್ರಕಾಶ್ ರೈ ಹೇಳಿದರು.

ಈ ಪ್ರಧಾನಿಗಳಿಗೆ ನಮ್ಮ ಕೂಗು, ನೋವು ಅವರ ಕಿವಿಗೆ ಕೇಳಿಸುವುದಿಲ್ಲ. ಆದ್ದರಿಂದ ನಾವೆಲ್ಲ ಹೋರಾಟ ಮಾಡಿ ಅಧಿಕಾರದಿಂದ ಇಳಿಸಬೇಕು. ಇವರನ್ನು ಕೆಳಗಿಳಿಸುವ ಮೂಲಕವೇ ನಮ್ಮ ಪ್ರಶ್ನೆ ಶುರು ಆಗಬೇಕು. ಈವತ್ತಿನ ಉದ್ಯೋಗದ ಹೋರಾಟ ಫ್ಯಾಶಿಸ್ಟ್‍ರನ್ನು ಕೆಳಗಿಳಿಸುವುದರಿಂದ ಮುಗಿಯುವುದಿಲ್ಲ. ನಮ್ಮ ಘೋಷಣೆ, ಹೋರಾಟ, ಆತಂಕ ತೀವ್ರತೆಯ ಬಿಸಿ ಮುಂಬರುವ ಸರಕಾರಗಳಿಗೂ ತಟ್ಟಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೈತ ಆಂದೋಲನದ ಯುವ ಮುಖಂಡ ಅವತಾರ್ ಸಿಂಗ್, ಕರ್ನಾಟಕ ವಿದ್ಯಾರ್ಥಿ ಸಂಘಟನೆ ರಾಜ್ಯಾಧ್ಯಕ್ಷ ಸರೋವರ್ ಬೆಂಕಿಕೆರೆ, ಸಂಚಾಲಕ ದುರ್ಗೇಶ್, ಎಸ್‍ಐಒ ರಾಜ್ಯಾಧ್ಯಕ್ಷ ಜಿಶಾನ್, ಸಂಚಾಲಕ ಮೊಹಮ್ಮದ್ ಫೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News