ಕಚೇರಿಗೆ ಹೋಗಲು ಹಿಂದೇಟು ಹಾಕುವವರ ಸಂಖ್ಯೆ ಹೆಚ್ಚಳ: ಕಡಿಮೆ ವೇತನಕ್ಕೂ ತಯಾರು; ವರದಿ
ಕಚೇರಿಗಳಲ್ಲಿ ವಾರಕ್ಕೆ ಐದು ದಿನ ಕೆಲಸ ಮಾಡಲು ಬಹಳಷ್ಟು ಮಂದಿ ಭಾರತೀಯರು ಇದೀಗ ಬಯಸುತ್ತಿಲ್ಲ. Indeed ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಶೇಕಡ 71ರಷ್ಟು ಮಂದಿ ಭಾರತೀಯ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಹುಡುಕುವ ವೇಳೆ ಸಮಯ ಸ್ಥಿತಿಸ್ಥಾಪಕತ್ವವನ್ನು ಬಯಸುತ್ತಾರೆ. ಮನೆಯಿಂದಲೇ ಕೆಲಸ ಮಾಡುವುದು ಅಥವಾ ತಮ್ಮ ಕೆಲಸದ ಅವಧಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವುದು ಇವರ ಆದ್ಯತೆ. ಕೆಲಸ ಹಾಗೂ ಜೀವನದ ನಡುವೆ ಸಮತೋಲನ ಸಾಧಿಸಲು ಮತ್ತು ಉತ್ಪಾದಕತೆಯ ದೃಷ್ಟಿಯಿಂದ ಕೆಲಸದ ಅವಧಿಯಲ್ಲಿ ಸ್ಥಿತಿಸ್ಥಾಪಕತ್ವ ಅಗತ್ಯ ಎನ್ನುವುದು ಅವರ ಅಭಿಪ್ರಾಯ ಎಂದು indiatoday.in ವರದಿ ಮಾಡಿದೆ.
ಭಾಗಶಃ ಮನೆಯಿಂದಲೇ ಕೆಲಸ ಮಾಡುವ ಹೈಬ್ರೀಡ್ ವಿಧಾನ ಅಥವಾ ರಿಮೋಟ್ ಕೆಲಸ ಉತ್ತಮ ಆಯ್ಕೆ ಎನ್ನುವುದು ಶೇಕಡ 70ರಷ್ಟು ಭಾರತೀಯ ವೃತ್ತಿಪರರ ಅಭಿಮತ. ಅಂತೆಯೇ ಉದ್ಯೋಗಾಂಕ್ಷಿಗಳ ಪೈಕಿ ಶೇಕಡ 67ರಷ್ಟು ಮಂದಿ ಮಾತ್ರ ತಮ್ಮ ವೇತನ ಹಾಗೂ ಆರೋಗ್ಯ ವಿಮೆ, ಕುಟುಂಬದ ರಜೆ ಮತ್ತು ಇತರ ಪ್ರಯೋಜನಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. 1200 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ದೃಢಪಟ್ಟಿದೆ.
ಕೆಲಸದ ವೇಳೆಯಲ್ಲಿ ಸ್ಥಿತಿಸ್ಥಾಪಕತ್ವ ಉದ್ಯೋಗಾಂಕ್ಷಿಗಳ ನಿರೀಕ್ಷೆಯಾದರೂ, ಉದ್ಯೋಗದಾತರು ಇದಕ್ಕೆ ಸಿದ್ಧರಿಲ್ಲ. ಜೂನ್‍ನಲ್ಲಿ ಉದ್ಯೋಗ ನೀಡಿದ ಶೇಕಡ 6.5ರಷ್ಟು ಮಂದಿ ಉದ್ಯೋಗದಾತರು ಮಾತ್ರ ವರ್ಕ್ ಫ್ರಮ್ ಹೋಮ್ ಉಲ್ಲೇಖ ಮಾಡಿದ್ದಾರೆ. ರಿಮೋಟ್ ಕೆಲಸದ ಬಗ್ಗೆ ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳ ಅಭಿಪ್ರಾಯ ಭಿನ್ನ.
2021ಕ್ಕೆ ಹೋಲಿಸಿದರೆ 2023ರಲ್ಲಿ ರಿಮೋಟ್ ಕೆಲಸದ ಆಯ್ಕೆ ಸ್ವಲ್ಪಮಟ್ಟಿಗೆ ಹೆಚ್ಚಿದೆ. ಆದರೆ ಇದು ಇನ್ನೂ ವ್ಯಾಪಕವಾಗಿ ಜಾರಿಯಾಗಿಲ್ಲ. ಉದ್ಯೋಗ ಹುಡುಕುವವರ ಪೈಕಿ ಶೇಕಡ 10ರಷ್ಟು ಮಂದಿ ರಿಮೋಟ್ ಅಥವಾ ಹೈಬ್ರೀಡ್ ಕೆಲಸಕ್ಕೆ ಒಲವು ಹೊಂದಿದ್ದಾರೆ ಎಂದು ಜಾಬ್‍ಪೋರ್ಟೆಲ್ ನಡೆಸಿದ ಸಮೀಕ್ಷೆ ಹೇಳುತ್ತಾರೆ. ಹಲವು ಮಂದಿ ಹೈಬ್ರೀಡ್ ಕೆಲಸದ ವಿಧಾನಕ್ಕೆ ಒಲವು ಹೊಂದಿದ್ದರೂ, ಶೇಕಡ 51ರಷ್ಟು ಮಂದಿ ಉದ್ಯೋಗದಾತರು ಮಾತ್ರ ಈ ಸೌಲಭ್ಯದ ಬಗ್ಗೆ ಒಲವು ಹೊಂದಿದ್ದಾರೆ ಎನ್ನುವುದು ಸಮೀಕ್ಷೆಯ ಸಾರ.
ಪರಸ್ಪರ ಸಂಪರ್ಕ ಹಾಗೂ ಸಹಭಾಗಿತ್ವಕ್ಕೆ ಕಚೇರಿಯ ಕೆಲಸವೇ ಸೂಕ್ತ ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಕೆಲಸದ ಪರಿಕಲ್ಪನೆಯೇ ಬದಲಾಗುತ್ತಿದೆ. ಕೆಲ ಸಂಸ್ಥೆಗಳು ಹೊಸ ಕೆಲಸದ ವಿಧಾನಕ್ಕೆ ಮುಕ್ತವಾಗಿವೆ.