ಬಿಜೆಪಿಯ ʼಚುನಾವಣಾ ಬಾಂಡ್ʼ ವಿಶ್ವದ ಅತಿ ದೊಡ್ಡ ಹಗರಣ : ರಾಹುಲ್ ಗಾಂಧಿ
ಮಂಡ್ಯ : ಬಿಜೆಪಿಯ ಚುನಾವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ವಸೂಲಿ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದ ಮಂಡ್ಯ ವಿವಿ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಈಡಿ, ಐಟಿ, ಸಿಬಿಐನಂತಹ ಸಂಸ್ಥೆಗಳ ಬಿಟ್ಟು ಹೆದರಿಸಿ ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂ.ಗಳನ್ನು ಬಿಜೆಪಿ ವಸೂಲಿ ಮಾಡಿದೆ. ನ್ಯಾಯಾಲಯದ ಆದೇಶದಂತೆ ಚುನಾವಣಾ ಬಾಂಡ್ ಹಗರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು ಒಂದೂವರೆ ಗಂಟೆ ಸಮಜಾಯಿಸಿ ನೀಡುವ ವೇಳೆ ಅವರ ಕೈ ನಡುಗುತ್ತಿತ್ತು. ಇದನ್ನು ಜನರು ಗೂಗಲ್‌ನಲ್ಲಿ ನೋಡಬಹುದು" ಎಂದು ಹೇಳಿದರು.
ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ನ್ಯಾಯಾಲಯದ ಆದೇಶದಿಂದ ಯಾರಿಂದ ಎಷ್ಟೆಷ್ಟು ಕೋಟಿ ರೂ.ಗಳನ್ನು ಬಾಂಡ್ ಮೂಲಕ ವಸೂಲಿಯಾಗಿದೆ ಎಂಬುದು ಜಗತ್ತಿಗೆ ತಿಳಿಯಿತು. ಇದು ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಕ್ರಮವೇ? ಎಂದು ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕದ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಇದೇ ಮಾದರಿಯಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟವೂ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿದ ಎಂದರು.
ಕೇಂದ್ರದಲ್ಲಿ ತಮ್ಮ ಸರಕಾರ ಅಸ್ತಿತ್ವಕ್ಕೆ ಬಂದರೆ, ಮಹಿಳೆಯರಿಗೆ ತಿಂಗಳಿಗೆ 8,500 ರೂ.ನಂತೆ ವರ್ಷಕ್ಕೆ ಒಂದು ಲಕ್ಷ ರೂ.ಗಳನ್ನು ದೇಶದ ಬಡ ಕುಟುಂಬದ ಹಿರಿಯ ಮಹಿಳೆಯರ ಖಾತೆಗೆ ಜಮಾ ಮಾಡಲಿದೆ. ದಿನದ 24 ಗಂಟೆ ದುಡಿಯುವ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ಇದು ಕ್ರಾಂತಿಕಾರಕ ಹೆಜ್ಜೆಯಾಗಲಿದೆ ಎಂದು ಅವರು ತಿಳಿಸಿದರು.
ಶ್ರೀಮಂತರ ಕೋಟ್ಯಂತರ ರೂ. ಸಾಲಮನ್ನಾ ಮಾಡಲಾಗುತ್ತದೆ. ಅನ್ನದಾತರ ಸಾಲಮನ್ನಾ ಮಾಡಲು ಸಾಧ್ಯವಾಗುವುದಿಲ್ಲ ಏಕೆ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಿದೆ. ಬೆಳೆಗಳಿಗೆ ಸ್ವಾಮಿನಾಥನ್ ವರದಿ ಅನ್ವಯ ಕನಿಷ್ಠ ಬೆಂಬಲ ನಿಗದಿ ಮಾಡಲಿದ್ದು, ಬೆಳೆ ವಿಮಾ ಪರಿಹಾರವನ್ನು 30 ದಿನದಲ್ಲಿ ಪಾವತಿಸಲಿದೆ ಎಂದು ಭರವಸೆ ನೀಡಿದರು.
ಡಿಪ್ಲೊಮಾ, ಪದವಿ ಮುಗಿಸಿದ ಯುವಜನರಿಗೆ ಮಾಸಿಕ 8.500 ರೂ. ಸಹಾಯಧನ ನೀಡಿ ಕೌಶಲ ತರಬೇತಿ ಕೊಡಿಸಿ ಕೆಲಸ ದೊರಕಿಸಿಕೊಡಲಾಗುವುದು. ಗುತ್ತಿಗೆ ಪದ್ದತಿ ಸಂಪೂರ್ಣ ನಿಷೇಧಿಸಿ ಸರಕಾರಿ, ಅರೆ ಸರಕಾರಿ ಇಲಾಖೆಯ ಗುತ್ತಿಗೆ ನೌಕರರನ್ನು ಖಾಯಂಗೊಳಿಸಲಾಗುವುದು. ಆಶಾ, ಅಂಗನವಾಡಿ ಕಾರ್ಯರ್ತೆಯರ ವೇತನ ಹೆಚ್ಚಿಸಲಾಗುವುದು. ಉದ್ಯೋಗ ಖಾತರಿ ಕೂಲಿಯನ್ನು 400 ರೂ.ಗೆ ಹೆಚ್ಚಿಸಲಾಗುವುದು. ಜತೆಗೆ ಯೋಜನೆಯನ್ನು ನಗರಗಳಿಗೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
“ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಟೀಕಿಸುತ್ತಿದ್ದೆವು. ಅದು ನಿಜ ಕೂಡ. ಈಗ ಬಿಜೆಪಿಯ ಎ ಟೀಂ ಜತೆ ಜೆಡಿಎಸ್‌ನ ಬಿ ಟೀಂ ವಿಲೀನವಾಗಿರುವುದು ಮತ್ತಷ್ಟು ಸ್ಪಷ್ಟವಾಗಿದೆ. ಈ ಚುನಾವಣೆ ಸಂವಿಧಾನ ವಿರೋಧಿಗಳ ಮತ್ತು ರಕ್ಷಕರ ನಡುವಿನ ಹೋರಾಟದ ಮಹತ್ವದ ಚುನಾವಣೆಯಾಗಿದೆ. ಆದ್ದರಿಂದ ಮತದಾರ ಬಂಧುಗಳು ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಸೇರಿದಂತೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು.” ಎಂದರು.